ಅಭಿಮಾನಿಗೆ ಚಿಕಿತ್ಸೆಗಾಗಿ ಫಂಡ್ ಸಂಗ್ರಹಿಸಲು ಬ್ಯೂಟಿಶಿಯನ್ ಆಗಿ ಬದಲಾದ ಟೆನಿಸ್ ಬೆಡಗಿ ಸಾನಿಯಾ....!

ಮುಂಬೈ, ಫೆ.5: ಆ್ಯಸಿಡ್ ದಾಳಿ ಸಂತ್ರಸ್ತೆ ಅಭಿಮಾನಿಯೊಬ್ಬರಿಗೆ ಫಂಡ್ ಸಂಗ್ರಹಿಸಲು ವಿಶ್ವದ ನಂ.1 ಡಬಲ್ಸ್ ಟೆನಿಸ್ ತಾರೆ ಸಾನಿಯಾ ಮಿರ್ಝಾ ಇತ್ತೀಚೆಗೆ ಬ್ಯೂಟಿಶಿಯನ್ ಬ್ರೆಶ್ ಕೈಗೆತ್ತಿಕೊಂಡು ತಾನು ಬ್ಯೂಟಿಶಿಯನ್‌ಗೂ ಸೈ ಎನ್ನುವುದನ್ನು ತೋರಿಸಿಕೊಟ್ಟರು.
ಆ್ಯಸಿಡ್ ದಾಳಿ ಸಂತ್ರಸ್ತೆ ಸೋನಿಯಾ ಎಂಬಾಕೆ ಸಾನಿಯಾ ಮಿರ್ಝಾ ಅಭಿಮಾನಿ. ತನ್ನನ್ನು ಭೇಟಿಯಾದ ಅಭಿಮಾನಿಯ ಚಿಕಿತ್ಸೆಗೆ ಸಾನಿಯಾ ಫಂಡ್ ಸಂಗ್ರಹಿಸಲು ಬಯಸಿದ್ದರು.ಇದಕ್ಕಾಗಿ ಸಾನಿಯಾ ತನ್ನ ಎಲ್ಲ ಕೆಲಸಗಳನ್ನು ಬದಿಗೊತ್ತಿ ಬ್ಯೂಟಿಶಿಯನ್ ಪಾತ್ರ ನಿರ್ವಹಿಸಿದರು.
ಸಾನಿಯಾ ಅವರು ಮುಂದಿನ ವಾರ ಪ್ರಸಾರವಾಗಲಿರುವ ಮಿಷನ್ ಸಪ್ನೆ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಬ್ಯೂಟಿಶಿಯನ್ ಆಗಿ 5,850 ರೂ. ಗಳಿಸಿದರು. ಆದರೆ ಸೋನಿಯಾ ಪಾಲಿಗೆ 5.85 ಲಕ್ಷ ರೂ. ಸಿಕ್ಕಿತು. ಅಂದರೆ ಸಾನಿಯಾ ಗಳಿಕೆಯ ನೂರು ಪಟ್ಟು ಹಣವನ್ನು ಪ್ರಾಯೋಜಕರು ಸೋನಿಯಾಗೆ ನೀಡಿದರು.
ಈ ಕಾರ್ಯಕ್ರಮದ ಬಳಿಕ ಸೋನಿಯಾ ಅವರು ತಾನು ಬ್ಯೂಟಿಶಿಯನ್ ಶೆಹ್‌ನಾಝ್ ಹುಸೈನ್ ಅಭಿಮಾನಿ ಎಂದರು. ಕೂಡಲೇ ಸಾನಿಯಾ ಅವರು ಸೋನಿಯಾ ಕಣ್ಣಿಗೆ ಬಟ್ಟೆ ಕಟ್ಟಿದರು. ಸೋನಿಯಾಳನ್ನು ಕಾರಲ್ಲಿ ಸೀದಾ ಬ್ಯೂಟಿಶಿಯನ್ ಶೆಹನಾಝ್ ಹುಸೈನ್ ಬಳಿ ಕರೆದೊಯ್ದರು. ಟೆನಿಸ್ ತಾರೆ ಸಾನಿಯಾ ಮೂಲಕ ಸೋನಿಯಾಳ ಕನಸು ನನಸಾಯಿತು.





