ಮಂಗಳೂರು : ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ - ಎಲ್.ಕೆ.ಅತೀಖ್

ಮಂಗಳೂರು, ಫೆ.5: ಪ್ರಜಾಪ್ರಭುತ್ವ ದೇಶದಲ್ಲಿ ದುರ್ಬಲ ವರ್ಗದವರ, ಅವಕಾಶ ವಂಚಿತರ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯ ಸರಕಾರದ ಡಿಪಿಎಆರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್ ಹೇಳಿದ್ದಾರೆ.
ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಡಾಜಿವರ್ಲ್ಡ್ ಡಾಟ್‌ಕಾಮ್ ವೆಬ್‌ಸೈಟ್’ನ 15ನೆ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಸಕ್ತ ಮಾಧ್ಯಮಗಳ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ತಾಂತ್ರಿಕ ಕ್ಷೇತ್ರದಲ್ಲಾಗಿರುವ ಬದಲಾವಣೆಯಿಂದ ಮಾಧ್ಯಮಗಳ ಮೂಲಕ ಜಗತ್ತಿನಾದ್ಯಂತ ಇರುವ ಜನರನ್ನು ಸಂಪರ್ಕಿಸಲು ಮತ್ತು ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ಅತೀಖ್ ಹೇಳಿದರು.
ಈ ನಡುವೆ ಮಾಧ್ಯಮ ಕ್ಷೇತ್ರದಲ್ಲಿ ವೇಗ ಪ್ರಾಮುಖ್ಯತೆ ಪಡೆದುಕೊಂಡಿದೆ. ಪತ್ರಿಕೋದ್ಯಮದಲ್ಲಿ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಮಾಡುವ ಮೊದಲು ಪರಿಶೀಲನೆ ನಡೆಸುವುದು ಮುಖ್ಯ. ವೇಗವಾಗಿ ಸುದ್ದಿಯನ್ನು ಕೊಡಬೇಕಾದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಈ ಸವಾಲನ್ನು ಎದುರಿಸಬೇಕಾಗಿದೆ. ಆದರೆ, ಈ ತಾಂತ್ರಿಕ ಬೆಳವಣಿಗೆ ಮನುಷ್ಯನನ್ನು ನಿಯಂತ್ರಿಸುವ ಮಟ್ಟಕ್ಕೆ ಹೋಗಬಾರದು ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪಿ.ಜಯರಾಮ ಭಟ್, ಅಬುಧಾಬಿಯ ಹೈಸ್ನ ಇಂಟರ್‌ನ್ಯಾಷನಲ್ ಎಲ್‌ಎಲ್‌ಸಿ ಇದರ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಪಿಂಟೊ, ರೋಹನ್ ಕಾರ್ಪೊರೇಶನ್‌ನ ಅಧ್ಯಕ್ಷ ರೋಹನ್ ಆರ್.ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಸ್ವಾಗತಿಸಿದರು.







