ದಕ್ಷಿಣ ಏಷ್ಯಾ ಗೇಮ್ಸ್‌ಗೆ ಅದ್ದೂರಿ ಚಾಲನೆ

ಗುವಾಹಟಿ, ಫೆ.5: ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ 12ನೆ ಆವೃತ್ತಿಯ ದಕ್ಷಿಣ ಏಷ್ಯಾ ಗೇಮ್ಸ್‌ಗೆ ವರ್ಣರಂಜಿತ ಚಾಲನೆ ನೀಡಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೇಮ್ಸ್ ಆರಂಭವಾಯಿತು ಎಂದು ಘೋಷಿಸುವ ಮೂಲಕ ಗೇಮ್ಸ್‌ಗೆ ಅಧಿಕೃತ ಚಾಲನೆ ನೀಡಿದರು. ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಗೇಮ್ಸ್ ಜ್ಯೋತಿಯನ್ನು ಹಿಡಿದು ಮುನ್ನಡೆದರು.
2,600 ಅಥ್ಲೀಟ್‌ಗಳು ಭಾಗವಹಿಸಲಿರುವ 12 ದಿನಗಳ ಕಾಲ ನಡೆಯಲಿರುವ ಏಷ್ಯನ್ ಗೇಮ್ಸ್‌ನ್ನು ಶಿಲ್ಲಾಂಗ್ ಹಾಗೂ ಅಸ್ಸಾಂ ಜಂಟಿಯಾಗಿ ಆಯೋಜಿಸುತ್ತಿವೆ.
ಗೇಮ್ಸ್‌ನಲ್ಲಿ ಭಾರತ ಸಹಿತ 8 ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಶ್ರೀಮಂತ ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ಅನಾವರಣಗೊಂಡಿತು. ಸಮಾರಂಭದಲ್ಲಿ ಅಸ್ಸಾಂ ಹಾಗೂ ಮೇಘಾಲಯದ ರಾಜ್ಯಪಾಲರುಗಳಲ್ಲದೆ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲಾ ಹಾಗೂ ಐಒಎ ಅಧ್ಯಕ್ಷ ಎನ್.ರಾಮಚಂದ್ರನ್ ಉಪಸ್ಥಿತರಿದ್ದರು.
ಕೆಲವು ಕಾರಣಗಳಿಂದ ಹಲವಾರು ಬಾರಿ ಮುಂದೂಡಲ್ಪಟ್ಟಿದ್ದ ಏಷ್ಯನ್ ಗೇಮ್ಸ್‌ನ್ನು ಕೊನೆಗೂ ನಾಲ್ಕು ವರ್ಷಗಳ ನಂತರ ನಡೆಯುತ್ತಿದೆ. 228 ಸ್ಪರ್ಧೆಗಳಲ್ಲಿ ಪುರುಷರು ಹಾಗೂ ಮಹಿಳೆಯರು ಸಮನಾಗಿ ಸ್ಪರ್ಧಿಸಲಿದ್ದಾರೆ. ಸ್ಪರ್ಧೆಯಲ್ಲಿ 228 ಚಿನ್ನ, 228 ಬೆಳ್ಳಿ ಹಾಗೂ 308 ಕಂಚಿನ ಪದಕಗಳನ್ನು ಇಡಲಾಗಿದೆ. ಭಾರತ ಈ ವರೆಗಿನ ಎಲ್ಲ ಆವೃತ್ತಿಯ ಗೇಮ್ಸ್‌ನಲ್ಲಿ ಅತ್ಯಂತ ಹೆಚ್ಚು ಪದಕಗಳನ್ನು ಜಯಿಸಿದೆ. ಈ ಬಾರಿ 245 ಮಹಿಳೆಯರು ಸೇರಿದಂತೆ ಒಟ್ಟು 521 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.







