ರಣಜಿ ಟ್ರೋಫಿ: ಸೌರಾಷ್ಟ್ರ ಸೆಮಿಫೈನಲ್‌ಗೆ

ವಲ್ಸಾಡ್, ಫೆ.5: ವಿದರ್ಭ ತಂಡವನ್ನು ಇನಿಂಗ್ಸ್ ಹಾಗೂ 85 ರನ್‌ಗಳ ಅಂತರದಿಂದ ಮಣಿಸಿರುವ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ ಮೊದಲ ತಂಡವೆನಿಸಿಕೊಂಡಿದೆ.
ಎಡಗೈ ವೇಗದ ಬೌಲರ್ ಜೈದೇವ್ ಉನದ್ಕಟ್ ಎರಡನೆ ಇನಿಂಗ್ಸ್‌ನಲ್ಲೂ 4 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉಡಾಯಿಸಿ ಸೌರಾಷ್ಟ್ರದ ಗೆಲುವಿನ ರೂವಾರಿಯಾದರು.
ಮೊದಲ ಇನಿಂಗ್ಸ್‌ನಲ್ಲಿ 151 ರನ್ ಗಳಿಸಿದ್ದ ವಿದರ್ಭ ಫಾಲೋ ಆನ್‌ಗೆ ಸಿಲುಕಿತು. ಮೂರನೆ ದಿನವಾದ ಶುಕ್ರವಾರ ಎರಡನೆ ಇನಿಂಗ್ಸ್‌ನಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿದ ಸೌರಾಷ್ಟ್ರ ತಂಡ ಟೀ ವಿರಾಮಕ್ಕೆ ಮೊದಲೇ 139 ರನ್‌ಗೆ ಆಲೌಟಾಯಿತು. ಉನದ್ಕಟ್(4-35) ಹಾಗೂ ದೀಪಕ್ ಪೂನಿಯಾ(3 ವಿಕೆಟ್) ವಿದರ್ಭಕ್ಕೆ ಸವಾಲಾದರು.
ವಿದರ್ಭ ಪರ ವಾಸಿಂ ಜಾಫರ್ 48 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. 5ನೆ ವಿಕೆಟ್‌ಗೆ ರವಿ ಹಾಗೂ ಜಾಫರ್ ಸೇರಿಸಿದ 44 ರನ್ ಇನಿಂಗ್ಸ್‌ನ ಗರಿಷ್ಠ ಜೊತೆಯಾಟವಾಗಿತ್ತು.
ಸಂಕ್ಷಿಪ್ತ ಸ್ಕೋರ್
ಸೌರಾಷ್ಟ್ರ ಮೊದಲ ಇನಿಂಗ್ಸ್: 375 ರನ್‌ಗೆ ಆಲೌಟ್
ವಿದರ್ಭ ಮೊದಲ ಇನಿಂಗ್ಸ್: 151(ಉನದ್ಕಟ್ 5-70)
ವಿದರ್ಭ ಎರಡನೆ ಇನಿಂಗ್ಸ್: 139(ಜಾಫರ್ 48, ಉನದ್ಕಟ್ 4-35)
ಗೆಲುವಿನತ್ತ ಪಂಜಾಬ್:
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಅಸ್ಸಾಂ ತಂಡವನ್ನು ಎರಡನೆ ಇನಿಂಗ್ಸ್‌ನಲ್ಲಿ ಕೇವಲ 101 ರನ್‌ಗೆ ಆಲೌಟ್ ಮಾಡಿರುವ ಪಂಜಾಬ್ ತಂಡ ರಣಜಿ ಟ್ರೋಫಿಯ ಸೆಮಿ ಫೈನಲ್ ತಲುಪುವತ್ತ ಚಿತ್ತವಿರಿಸಿದೆ.
ಗೆಲ್ಲಲು 288 ರನ್ ಗುರಿ ಪಡೆದಿದ್ದ ಪಂಜಾಬ್ ತಂಡ 3ನೆ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿದ್ದು, ಗೆಲುವಿಗೆ 2 ವಿಕೆಟ್ ನೆರವಿನಿಂದ ಇನ್ನು 64 ರನ್ ಗಳಿಸಬೇಕಾಗಿದೆ.
ಪಂಜಾಬ್ 26 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ 4ನೆ ವಿಕೆಟ್‌ಗೆ 70 ರನ್ ಜೊತೆಯಾಟ ನಡೆಸಿದ ಗುರುಕೀರತ್ ಸಿಂಗ್(64 ರನ್, 55 ಎಸೆತ, 12 ಬೌಂಡರಿ, 2 ಸಿ.) ಹಾಗೂ ಮನ್‌ದೀಪ್ ಸಿಂಗ್ ತಂಡವನ್ನು ಆಧರಿಸಿದರು. ಇದಕ್ಕೆ ಮೊದಲು 4 ವಿಕೆಟ್‌ಗೆ 23 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಸ್ಸಾಂ ತಂಡವನ್ನು ಬರೀಂದರ್ ಸ್ರಾನ್(5-43) ಹಾಗೂ ಸಿದ್ದಾರ್ಥ್ ಕೌಲ್(4-25) ಕೇವಲ 101 ರನ್‌ಗೆ ಆಲೌಟ್ ಮಾಡಿದರು. ಜಾರ್ಖಂಡ್‌ಗೆ ಕಠಿಣ ಸವಾಲು
ಮೈಸೂರು, ಫೆ.5: ಮುಂಬೈ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ ಗೆಲುವಿಗೆ ಕಠಿಣ ಸವಾಲು ಪಡೆದಿದೆ.
ಯುವ ದಾಂಡಿಗ ಶ್ರೇಯಸ್ ಐಯ್ಯರ್ ಬಾರಿಸಿದ ಅರ್ಧಶತಕ(81 ರನ್, 106 ಎಸೆತ, 9 ಬೌಂಡರಿ, 2 ಸಿಕ್ಸರ್) ನೆರವಿನಿಂದ ಮುಂಬೈ ತಂಡ ಎರಡನೆ ಇನಿಂಗ್ಸ್‌ನಲ್ಲಿ 245 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ 244 ರನ್ ಮುನ್ನಡೆ ಪಡೆದಿದ್ದ ಮುಂಬೈ ತಂಡ ಜಾರ್ಖಂಡ್ ಗೆಲುವಿಗೆ 490 ರನ್ ಗುರಿ ನೀಡಿತು.
ಎರಡನೆ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ 3ನೆ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ. ಗೆಲುವಿಗೆ ಇನ್ನೂ 462 ರನ್ ಗಳಿಸಬೇಕಾಗಿದೆ. 2ನೆ ಇನಿಂಗ್ಸ್‌ನಲ್ಲಿ ಮುಂಬೈ ಪರ ಗರಿಷ್ಠ ಸ್ಕೋರ್ ದಾಖಲಿಸಿದ ಅಯ್ಯರ್ ರಣಜಿ ಟ್ರೋಫಿ ಋತುವಿನಲ್ಲಿ ರುಸಿ ಮೋದಿ ಹಾಗೂ ಅಜಿಂಕ್ಯ ರಹಾನೆ ನಂತರ ಸಾವಿರ ರನ್ ಗಳಿಸಿದ ಮುಂಬೈನ ಮೂರನೆ ಯುವ ದಾಂಡಿಗ ಎನಿಸಿಕೊಂಡರು.
ಹಂಗಾಮಿ ನಾಯಕ ಅಭಿಷೇಕ್ ನಾಯರ್ 43 ರನ್ ಗಳಿಸಿದರು. ಜಾರ್ಖಂಡ್ ಲೆಗ್ ಸ್ಪಿನ್ನರ್ ಸಮರ್ ಖಾದ್ರಿ(5-62) ಮುಂಬೈ ತಂಡವನ್ನು 2ನೆ ಇನಿಂಗ್ಸ್‌ನಲ್ಲಿ 245 ರನ್‌ಗೆ ನಿಯಂತ್ರಿಸಿದರು.
ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್ ಮೊದಲ ಇನಿಂಗ್ಸ್: 172, 2ನೆ ಇನಿಂಗ್ಸ್ 28/1
ಮುಂಬೈ ಮೊದಲ ಇನಿಂಗ್ಸ್: 416, 2ನೆ ಇನಿಂಗ್ಸ್ 245







