ಇಂದು ಐಪಿಎಲ್ ಆಟಗಾರರ ಹರಾಜು, 351 ಮಂದಿ ಕಣದಲ್ಲಿ
ಬೆಂಗಳೂರು, ಫೆ.5: ಒಂಬತ್ತನೆಯ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಉದ್ಯಾನನಗರಿಯಲ್ಲಿ ಶನಿವಾರ ನಡೆಯಲಿದೆ. ಒಟ್ಟು 351 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಇದರಲ್ಲಿ ಭಾರತದ 230 ಆಟಗಾರರಿದ್ದಾರೆ.
ಐಸಿಸಿ ಅಸೋಸಿಯೇಟ್ ದೇಶದ ಇಬ್ಬರು ಆಟಗಾರರಾದ ಐರ್ಲೆಂಡ್‌ನ ಆಲ್‌ರೌಂಡರ್ ಕೇವಿನ್ ಒಬ್ರಿಯಾನ್(30 ಲಕ್ಷ ರೂ. ಮೂಲ ಬೆಲೆ) ಹಾಗೂ ಕೆನಡಾದ ಆಲ್‌ರೌಂಡರ್ ನಿಖಿಲ್ ದತ್ತ(10 ಲಕ್ಷ ರೂ.)ಹರಾಜಿನ ಪಟ್ಟಿಯಲ್ಲಿದ್ದಾರೆ.
ಒಟ್ಟು 351 ಆಟಗಾರರ ಪೈಕಿ 219 ಆಟಗಾರರು ಹೊಸಬರು. ಆಸ್ಟ್ರೇಲಿಯದ 29 ಆಟಗಾರರು, ವೆಸ್ಟ್‌ಇಂಡೀಸ್‌ನ 20 ಆಟಗಾರರು, ದಕ್ಷಿಣ ಆಫ್ರಿಕ (18)ಹಾಗೂ ಶ್ರೀಲಂಕಾದ(16) ಆಟಗಾರರು ಹರಾಜಿನಲ್ಲಿದ್ದಾರೆ. 351 ಆಟಗಾರರಲ್ಲಿ ಗರಿಷ್ಠ 116 ಆಟಗಾರರನ್ನು ಖರೀದಿಸಬಹುದು.
ಪ್ರತಿ ತಂಡ ಕನಿಷ್ಠ 28 ಆಟಗಾರರನ್ನು ಖರೀದಿಸಬೇಕು. 36ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಖರೀದಿಸುವಂತಿಲ್ಲ. ಪ್ರತಿ ತಂಡ 66 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಹೂಡುವಂತಿಲ್ಲ.
ಈ ವರ್ಷದ ಹರಾಜಿನಲ್ಲಿ ಖರೀದಿಸಲ್ಪಡುವ ಆಟಗಾರರು ಫ್ರಾಂಚೈಸಿಯೊಂದಿಗೆ ಒಂದು ವರ್ಷ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಇನ್ನೂ ಒಂದು ವರ್ಷ ವಿಸ್ತರಿಸುವ ಆಯ್ಕೆಯೂ ಇದೆ. ಡೆಲ್ಲಿ ಡೇರ್‌ಡೆವಿಲ್ಸ್ ಖಾತೆಯಲ್ಲಿ ಗರಿಷ್ಠ 37.15 ಕೋಟಿ ರೂ. ಇದೆ.
ಎರಡು ಹೊಸ ತಂಡಗಳಾದ ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜಾಯಂಟ್ಸ್ ತಲಾ 27 ಕೋಟಿ ರೂ. ಹೊಂದಿವೆ.
ಪ್ರಮುಖ ಆಟಗಾರರು: ಈ ಬಾರಿಯ ಹರಾಜಿನಲ್ಲಿ 9 ಪ್ರಮುಖ ಆಟಗಾರರಿದ್ದಾರೆ. ಅವರೆಂದರೆ: ಇಶಾಂತ್ ಶರ್ಮ, ಆಶಿಷ್ ನೆಹ್ರಾ, ಶೇನ್ ವ್ಯಾಟ್ಸನ್, ಕೇವಿನ್ ಪೀಟರ್ಸನ್, ಯುವರಾಜ್ ಸಿಂಗ್, ಡೇಲ್ ಸ್ಟೇಯ್ನಾ, ಆ್ಯರೊನ್ ಫಿಂಚ್, ಮಾರ್ಟಿನ್ ಗಪ್ಟಿಲ್ ಹಾಗೂ ಡ್ವೇಯ್ನೇ ಸ್ಮಿತ್. ಈ ಪೈಕಿ ಐವರು ಆಟಗಾರರ ಮೂಲ ಬೆಲೆ 2 ಕೋಟಿ ರೂ., ಸ್ಟೇಯ್ನಿ 1.5 ಕೋ.ರೂ, ಫಿಂಚ್ 1 ಕೋ.ರೂ. ಹಾಗೂ ಗಪ್ಟಿಲ್ ಹಾಗೂ ಸ್ಮಿತ್ 50 ಲಕ್ಷ ರೂ. ಮೂಲ ಬೆಲೆ ಹೊಂದಿರುತ್ತಾರೆ. ಏಳು ಆಟಗಾರರಾದ ಮೈಕಲ್ ಹಸ್ಸಿ, ಧವಲ್ ಕುಲಕರ್ಣಿ, ಕೇನ್ ರಿಚರ್ಡ್‌ಸನ್, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ ಹಾಗೂ ಮಿಚೆಲ್ ಮಾರ್ಷ್ ಮೂಲ ಬೆಲೆ 2 ಕೋಟಿ ರೂ. ಕರ್ನಾಟಕದ ಕರುಣ್ ನಾಯರ್ (10 ಲಕ್ಷ ರೂ. ಆರಂಭಿಕ ಬೆಲೆ) 2016ರ ಹರಾಜಿನ ಪ್ರಮುಖ ಮಧ್ಯಮ ಕ್ರಮಾಂಕದ ದಾಂಡಿಗ. ರಾಜಸ್ಥಾನ ರಾಯಲ್ಸ್ ಪರ 25 ಐಪಿಎಲ್ ಪಂದ್ಯಗಳನ್ನು ಆಡಿರುವ ನಾಯರ್ 511 ರನ್ ಗಳಿಸಿದ್ದಾರೆ. ಆಟಗಾರರ ಕನಿಷ್ಠ ಮೂಲ ಬೆಲೆ 10 ಲಕ್ಷ ರೂ.
ಶನಿವಾರ ನ್ಯೂಝಿಲೆಂಡ್-ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ-ಇಂಗ್ಲೆಂಡ್ ಹಾಗೂ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಹರಾಜಿನ ಮೇಲೆ ಪರಿಣಾಮಬೀರಲಿವೆ







