ರಾಜಸ್ಥಾನದ ಬಿಜೆಪಿ ಎಂಎಲ್‌ಎ ವಿರುದ್ಧ 20 ಕ್ರಿಮಿನಲ್ ಕೇಸ್

ಜೈಪುರ, ಫೆ.6: ರಾಜಸ್ಥಾನದ ಅಕ್ಲೇರಾ ಕ್ಷೇತ್ರದ ಬಿಜೆಪಿ ಎಂಎಲ್ ಎ ಕನ್ವಾರ‍್ ಲಾಲ್ ಮಹಾ ಕ್ರಿಮಿನಲ್. ಇವರ ವಿರುದ್ಧ 20ಕ್ರಿಮಿನಲ್ ಪ್ರಕರಣಗಳಿಗೆ. ಆದರೆ ಒಂದು ಬಾರಿ ಮಾತ್ರ ಇವರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ಕಳೆದ ತಿಂಗಳು ನಾಗರಿಕ ಸಮಾಜ ಸಂಘಟನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ ಆರೋಪ ಹೊತ್ತಿದ್ದ ಕನ್ವಾರ್‌ಲಾಲ್ ವಿರುದ್ಧ ಅವರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎರಡು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇವರ ವಿರುದ್ಧ ಒಂಬತ್ತು ಪ್ರಕರಣಗಳು ತನಿಖೆಯ ಹಂತದಲ್ಲಿದೆ. ಮನೆಗೆ ನುಗ್ಗಿದ ಪ್ರಕರಣಗಳು, ಧಾರ್ಮಿಕ ಗ್ರಂಥಗಳನ್ನು ಹರಿದು ಹಾಕಿರುವ ಪ್ರಕರಣಗಳು ಕನ್ವಾರ‍್ ಲಾಲ್ ವಿರುದ್ಧ ದಾಖಲಾಗಿವೆ.
ಆರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಸಿಐಡಿ-ಸಿಬಿ ಒಂದು ಪ್ರಕರಣದ ತನಿಖೆ ನಡೆಸುತ್ತಿದೆ.
ಮುಖ್ಯಮಂತ್ರಿ ವಸುಂಧರಾ ರಾಜೆ ಪುತ್ರ ದುಶ್ಯಂತ್ ಸಿಂಗ್ ಅವರ ಜಲಾವರ‍್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಅಕ್ಲೇರಾ ಕ್ಷೇತ್ರದ ಶಾಸಕ ಕನ್ವಾರ‍್ ಲಾಲ್ 2013ರಲ್ಲಿ ಚುನಾವಣೆಗೆ ಸ್ಫರ್ಧಿಸುವಾಗ ತನ್ನ ಮೇಲೆ ಐದು ಪ್ರಕರಣಗಳು ದಾಖಲಾಗಿರುವುದಾಗಿ ಹೇಳಿಕೆ ನೀಡಿದ್ದರು.
ಇತ್ತೀಚೆಗೆ ಮಝ್ಜೂರ್ ಕಿಸನ್ ಶಕ್ತಿ ಸಂಘಟನೆ (ಎಂಕೆಎಸ್‌ಎಸ್) ಆರ್ ಟಿಐ ಕಾಯ್ದೆಯಡಿ ಈ ವಿವರ ಕಲೆ ಹಾಕಿದೆ.





