ಆಗ್ರ ಮೆಡಿಕಲ್ ಕಾಲೇಜಿನಲ್ಲಿ 45 ವೈದ್ಯರು 95 ನೌಕರರು ನಾಪತ್ತೆ!

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಆರೋಗ್ಯ ಸಚಿವ ಹಾಗೂ ಸರಕಾರಿ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದರೂ ಎಸ್ ಎನ್ ಮೆಡಿಕಲ್ ಕಾಲೇಜ್‌ನ ವಿಐಪಿ ಸಂಸ್ಕೃತಿ ನಿಂತಿಲ್ಲ. ಇಲ್ಲಿ ನೌಕರರು ಮತ್ತು ವೈದ್ಯರು ಮನಸಿಗೆ ಬಂದಾಗ ಬರುತ್ತಾರೆ. ಮನಸಿಗೆ ಬಂದಾಗ ಹೋಗುತ್ತಿರುತ್ತಾರೆ. ಒಪಿಡಿ ಮತ್ತು ಇತರ ವಿಭಾಗಗಳ ವೈದ್ಯರು ಮೂರು ಮೂರು ಗಂಟೆ ತಡವಾಗಿ ತಲುಪುತ್ತಿದ್ದಾರೆ. ಶುಕ್ರವಾರ ಈ ಬಗ್ಗೆ ಹಾಜಾರಾತಿ ಪುಸ್ತಕ ತಪಾಸಣೆ ಮಾಡಿಸಿ ಈ ಕರ್ಮಕಾಂಡವನ್ನು ಪ್ರಾಂಶುಪಾಲರು ಪತ್ತೆ ಮಾಡಿಸಿದ್ದರು. ಶುಕ್ರವಾರದಂದು ಒಪಿಡಿ ಸಹಿತ 17 ವಿಭಾಗಗಳ ರಿಸ್ಟರ್ ತಪಾಸಿಸಿದಾಗ 45 ವೈದ್ಯರ ಸಹಿತ 95 ನೌಕರರು ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಇಲ್ಲಿ ಒಪಿಡಿ ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾಗುತ್ತದೆ. ಆದರೂ ಸೀನಿಯರ್ ವೈದ್ಯರು ಬರುವುದಿಲ್ಲ. ಜ್ಯೂನಿಯರ್ ವೈದ್ಯರು ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ರೋಗಿಗಳ ಭಾರೀ ಸಂಖ್ಯೆ ಇಲ್ಲಿರುವುದರಿಂದ ಹಿರಿಯ ವೈದ್ಯರು ಇಲ್ಲದಿರುವುದರಿಂದಾಗಿ ಕೆಲವೊಮ್ಮೆ ಹೊಡೆದಾಟದ ಸ್ಥಿತಿಯೂ ನಿರ್ಮಾಣವಾಗುತ್ತಿದೆ. ಈ ಕುರಿತು ಪ್ರಾಂಶುಪಾಲರಿಗೆ ದೂರು ಸಿಕ್ಕಿದಾಗ ಅವರು ಹಾಜರಿ ಪುಸ್ತಕ ತಪಾಸಣೆಗೆ ಕೆಲವರನ್ನು ನೇಮಿಸಿದ್ದರು.





