ಪರಮಾಣು ಪರಿಹಾರ ಒಪ್ಪಂದಕ್ಕೆ ಭಾರತ ಸಹಿ: ಅಮೆರಿಕ ಸ್ವಾಗತ
ವಾಶಿಂಗ್ಟನ್, ಫೆ. 6: ಪರಮಾಣು ಅವಗಢಗಳಿಗೆ ಪೂರಕ ಪರಿಹಾರ ನೀಡುವ ಒಪ್ಪಂದ (ಸಿಎಸ್‌ಸಿ)ಕ್ಕೆ ಭಾರತ ಸಹಿ ಹಾಕಿರುವುದನ್ನು ಅಮೆರಿಕದ ಸ್ವಾಗತಿಸಿದೆ. ಇದು ಭಾರತದ ಪರಮಾಣು ರಿಯಾಕ್ಟರ್‌ಗಳ ನಿರ್ಮಾಣದಲ್ಲಿ ಅಮೆರಿಕದ ಕಂಪೆನಿಗಳು ಪಾಲ್ಗೊಳ್ಳಲು ಅನುವು ಮಾಡಿಕೊಡುವ ಮಹತ್ವದ ಕ್ರಮವಾಗಿದೆ ಎಂದು ಅದು ಹೇಳಿದೆ.
ಜಾಗತಿಕ ಪರಮಣು ಬಾಧ್ಯತಾ ವ್ಯವಸ್ಥೆಯನ್ನು ರಚಿಸುವಂತೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ಪರಮಾಣು ಸುರಕ್ಷತಾ ಕ್ರಿಯಾ ಯೋಜನೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಸಿಎಸ್‌ಸಿಯಲ್ಲಿ ಭಾರತದ ಸದಸ್ಯತ್ವ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಅಭಿಪ್ರಾಯಪಟ್ಟರು.
‘‘ಇದು ಭಾರತದ ಪರಮಾಣು ರಿಯಾಕ್ಟರ್‌ಗಳ ನಿರ್ಮಾಣದಲ್ಲಿ ಅಮೆರಿಕದ ಕಂಪೆನಿಗಳು ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ. ಅಂದರೆ ಭಾರತೀಯರಿಗೆ ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ದೊರೆಯುತ್ತದೆ, ಅಧಿಕ ಇಂಗಾಲ ಮೂಲಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುತ್ತದೆ ಹಾಗೂ ಆ ಮೂಲಕ ಪರಿಸರಕ್ಕೆ ಪೂರಕವಾಗಿರುತ್ತದೆ ಹಾಗೂ ಭಾರತದ ಬೃಹತ್ ಹಾಗೂ ಬೆಳೆಯುತ್ತಿರುವ ಆರ್ಥಿಕತೆಗೆ ಹೆಚ್ಚಿನ ಇಂಧನ ಭದ್ರತೆಯನ್ನು ನೀಡುತ್ತದೆ’’ ಎಂದು ಕಿರ್ಬಿ ನುಡಿದರು.
ಇದು ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಜಾರಿಗೆ ನೆರವು ನೀಡುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಿರ್ಬಿ, ‘‘ಜಾಗತಿಕ ಪರಮಾಣು ಬಾಧ್ಯತೆ ವ್ಯವಸ್ಥೆಯೊಂದನ್ನು ರಚಿಸುವಲ್ಲಿ ಭಾರತದ ಕ್ರಮ ಒಂದು ಮಹತ್ವದ ಹೆಜ್ಜೆ ಎಂಬುದಾಗಿ ನಾವು ಭಾವಿಸುತ್ತೇವೆ ಹಾಗೂ ಇದು ಭಾರತದಲ್ಲಿ ಪರಮಾಣು ವಿದ್ಯುತ್‌ನ ಬಳಕೆಯನ್ನು ವಿಸ್ತರಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೂ ಸೋಪಾನವಾಗಿದೆ’’ ಎಂದರು.
ಪರಮಾಣು ಅವಗಢಗಳಿಗೆ ಪೂರಕ ಪರಿಹಾರ ನೀಡುವ ಒಪ್ಪಂದ (ಸಿಎಸ್‌ಸಿ)ಕ್ಕೆ ಭಾರತ ಗುರುವಾರ ಸಹಿ ಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.







