ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಘೋಷಿಸಲಾಗಿದ್ದ ವಿದ್ಯುತ್ ರಜೆ ರದ್ದು
ಬೆಂಗಳೂರು.ಫೆ.6: ರಾಜ್ಯದ ವಿದ್ಯುತ್ ಜಾಲಕ್ಕೆ 1920 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಬೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಘೋಷಿಸಲಾಗಿದ್ದ ವಿದ್ಯುತ್ ರಜೆಯನ್ನು ತಕ್ಷಣದಿಂದ ರದ್ದು ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು. ವಿದ್ಯುತ್ ಕೊರತೆ ಸಧ್ಯಕ್ಕೆ ನಿವಾರಣೆಯಾಗಿದ್ದು, ಈ ಬಾರಿಯ ಬೇಸಿಗೆ ಸಮಯವನ್ನು ನಿರಾಂತಕವಾಗಿ ಕಳೆಯಲಿದೆ. ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಆಗದಂತೆ ಈಗಾಗಲೇ ವಿದ್ಯುತ್ ಕಂಪನಿಗಳ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ವಿದ್ಯುತ್ ಖರೀದಿ ಮುಂದುವರಿಯಲಿದೆ. ಜತೆಗೆ ಕೂಡಂಕುಳಂ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ 220 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತಿದೆ. ಇದೇ ರೀತಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕದಿಂದ ಏಳುನೂರು ಮೆಗಾವ್ಯಾಟ್ ಲಭ್ಯವಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘ ಸಂಸ್ಥೆಗಳು, ಉದ್ಯಮಗಳು ಮಾಡಿದ ಮನವಿಯ ಜತೆಗೆ ಲಿಂಗನಮಕ್ಕಿ, ಸೂಪಾ, ಮಾಣಿ ಜಲಾಶಯಗಳಿಂದ ಒಂದು ಸಾವಿರ ಮೆಗಾವ್ಯಾಟ್‌ನಷ್ಟು ಜಲವಿದ್ಯುತ್‌ನ್ನು ಹೆಚ್ಚುವರಿಯಾಗಿ ಉತ್ಪಾದನೆ ಮಾಡಲಾಗುತ್ತಿದೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ ಘಟಕದಿಂದ ಇನ್ನೊಂದು ತಿಂಗಳಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಘೋಷಿಸಲಾಗಿದ್ದ ರಜೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಪಾವಗಡದಲ್ಲಿ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪನೆ ಸಂಬಂಧ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರ ಎನ್.ಟಿ.ಪಿ.ಸಿ ಟೆಂಡರ್ ಕರೆಯಲಾಗಿದೆ. ಪಾವಗಡದ ಸೌರ ವಿದ್ಯುತ್ ಘಟಕಕ್ಕೆ ಹನ್ನೆರಡು ಸಾವಿರ ಎಕರೆ ಜಾಗದಲ್ಲಿ ಪ್ಯಾನಲ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ ರೈತ ಸಮುದಾಯ ಮೂರು ಸಾವಿರದ ಒಂದು ಎಕರೆ ಭೂಮಿಯನ್ನು ಇಪ್ಪತ್ತೆಂಟು ವರ್ಷಗಳ ಕಾಲದ ಗುತ್ತಿಗೆಗೆ ನೀಡಿದೆ ಎಂದರು.
ಹೀಗೆ ಪಡೆದ ಭೂಮಿಗೆ ಪ್ರತಿ ಎಕರೆಗೆ ವರ್ಷವೊಂದಕ್ಕೆ ಇಪ್ಪತ್ತೊಂದು ಸಾವಿರ ರೂ ನೀಡಲಾಗುವುದು. ಅದೇ ರೀತಿ ಪ್ರತಿ ಎರಡು ವರ್ಷಗಳಿಗೊಮ್ಮೆ ಶೇಕಡಾ ಐದರಷ್ಟು ಹೆಚ್ಚುವರಿ ಹಣವನ್ನು ಅವರಿಗೆ ನೀಡಾಗುವುದು. ರಾಜ್ಯದಲ್ಲಿ ವಿದ್ಯುತ್ ಉಳಿತಾಯ ವರ್ಷವನ್ನು ಘೋಷಿಸಿದ್ದು ಇದರನ್ವಯ ಗ್ರಾಹಕರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಲಾಗಿದ್ದು ಈಗಾಗಲೇ ಹದಿನಾರು ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ಗ್ರಾಹಕರು ಸ್ವಯಂ ಆಗಿ ಖರೀದಿಸಿದ್ದಾರೆ.
ಹಲವಾರು ವಿದ್ಯುತ್ ಯೋಜನೆಗಳು ಪ್ರಗತಿಯಲ್ಲಿದ್ದು ಜೂನ್ ವೇಳೆಗೆ ಇನ್ನೂ ಹೆಚ್ಚಿನ ವಿದ್ಯುತ್ ರಾಜ್ಯದ ಸ್ಥಾವರಗಳಿಗೆ ಸೇರ್ಪಡೆಯಾಗಲಿದೆ ಎಂದ ಅವರು, ಉಡುಪಿ ಶಾಖೋತ್ಪನ್ನ ಸ್ಥಾವರ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಲಾಗಿದೆ ಎಂದೂ ಅವರು ಹೇಳಿದರು.
ಕೇಂದ್ರ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ಬಂದಿರುವುದರ ಜತೆ ರಾಜ್ಯದಲ್ಲಿ ಅನೇಕ ಖಾಸಗಿ ಸಂಸ್ಥೆಗಳು ವಿದ್ಯುತ್ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಈ ಪೈಕಿ ಬಹುತೇಕ ಯೋಜನೆಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆ ಅಂತಿಮ ಹಂತದಲ್ಲಿದೆ. ಹೀಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿಯೇ ರೈತಸಂಘಗಳಿಗೆ ನೀಡಿದ ಭರವಸೆಯಂತೆ ಪ್ರತಿ ನಿತ್ಯ ಆರರಿಂದ ಏಳು ಗಂಟೆಗಳ ಕಾಲದ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಗ್ರಾಹಕರಿಗೆ ಗುಣ ಮಟ್ಟದ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.ಈ ನಿಟ್ಟಿನಲ್ಲಿ ಇಂಧನ ಇಲಾಖೆ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 78,553 ಕೋಟಿ ರೂ ಮೌಲ್ಯದ ಮೂವತ್ತೆಂಟು ಪ್ರಸ್ತಾವನೆಗಳು ಬಂದಿವೆ ಎಂದರು.
ಇದರ ಜತೆಗೆ ಇನ್ನೂ ಕೆಲವು ಉದ್ದಿಮೆದಾರರು ರಾಜ್ಯದಲ್ಲಿ ಹೊಸತಾಗಿ ವಿದ್ಯುತ್ ಉತ್ಪಾದಿಸಲು ಆಸಕ್ತಿ ತೋರಿದ್ದು ಸೌರ ವಿದ್ಯುತ್,ಪವನ ವಿದ್ಯುತ್,ಜಲವಿದ್ಯುತ್ ಹಾಗೂ ಶಾಖೋತ್ಪನ್ನ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ದೇಶ-ವಿದೇಶಗಳ ಹಲವಾರು ಕಂಪನಿಗಳು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಪ್ರಸ್ತಾವವನ್ನು ಇನ್ನೊಂದು ವಾರದೊಳಗಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಎಲ್‌ಇಡಿ ಬಲ್ಬ್ ಟೆಂಡರ್ ಕರೆದು ಅಂತಿಮಗೊಳಿಸುವ ಬದಲು ರಾಷ್ಟ್ರ ಮಟ್ಟದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಟೆಂಡರ್ ಕರೆದು ಕಡಿಮೆ ದರದಲ್ಲಿ ಗ್ರಾಹಕರಿಗೆ ಬಲ್ಬ್‌ಗಳನ್ನು ವಿತರಿಸಲು ಮುಂದಾಗುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ.
ಆದರೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ರಾಜ್ಯದ ಶೇಕಡಾ ನಲವತ್ತರಷ್ಟು ಉತ್ಪಾದಕರಿಗೆ ಅವಕಾಶ ನೀಡಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸೌರ ವಿದ್ಯುತ್ ಹಾಗೂ ಎಲ್‌ಇಡಿ ಬಲ್ಬ್ ತಮ್ಮ ಯೋಜನೆ ಎಂದು ಪ್ರಕಟಿಸಿದೆ. ಆದರೆ ಕೇಂದ್ರ ಸರ್ಕಾರ ಟೆಂಡರ್ ಕರೆದು, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಉತ್ಪಾದಕರಿಗೆ ಸಾಲ ಒದಗಿಸಿದ ಮಾತ್ರಕ್ಕೆ ಈ ಯೋಜನೆ ಕೇಂದ್ರ ಸರ್ಕಾರದ್ದಾಗುವುದಿಲ್ಲ.
ಹೀಗಾಗಿ ಆ ಪಕ್ಷದವರು ಏನೇ ಹೇಳಲಿ. ಆದರೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಮುಂದುವರಿಸುತ್ತದೆ. ಸೌರ ವಿದ್ಯುತ್ ಹಾಗೂ ಎಲ್‌ಇಡಿ ಬಲ್ಬ್ ಯೋಜನೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ ಎಂದರು.
ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಕುರಿತು ಹಲವು ಸಂಸ್ಥೆಗಳ ಜತೆ ಮಾತುಕತೆ ಪ್ರಗತಿಯಲ್ಲಿದ್ದು ಈ ಕುರಿತು ಶೀಘ್ರದಲ್ಲಿ ವಿವರ ನೀಡುವುದಾಗಿ ಅವರು ಹೇಳಿದರು.







