ಮೂಡುಬಿದಿರೆ : ಕೆಲ್ಲಪುತ್ತಿಗೆಯಲ್ಲಿ 18ನೇ ವರ್ಷದ ಸುರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ : ದರಗುಡ್ಡೆ ಗ್ರಾ.ಪಂಚಾಯತ್ ವ್ಯಾಪ್ತಿಯ ಕೆಲ್ಲಪುತ್ತಿಗೆಯಲ್ಲಿ ನಡೆಯುವ 18ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಬಯಲು ಕಂಬಳವು ಶನಿವಾರ ಆರಂಭಗೊಂಡಿತು. ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆಲ್ಲಪುತ್ತಿಗೆ ಗುತ್ತಿನ ಜೀವಂಧರ ಚೌಟ ಮತ್ತು ದರೆಗುಡ್ಡೆಯ ಅಸ್ರಣ್ಣ ನಾಗರಾಜ ಭಟ್ ಕಂಬಳದ ಕರೆಗಳಿಗೆ ದೇವರ ಪ್ರಸಾದವನ್ನು ಹಾಕಿ ನಂತರ ದೀಪವನ್ನು ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಅಶೋಕ್ ಜೈನ್, ಕಂಬಳ ಸಮಿತಿಯ ಅಧ್ಯಕ್ಷ ಸುಭಾಸ್‌ಚಂದ್ರ ಚೌಟ ಕೆಲ್ಲಪುತ್ತಿಗೆ ಗುತ್ತು, ತೀರ್ಪುಗಾರರಾದ ಉಮೇಶ್ ಕರ್ಕೇರಾ ಪುತ್ತೂರು ಮತ್ತು ವಿದ್ಯಾಧರ ಜೈನ್ ರೆಂಜಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದ ಜನರಿಗೆ ಜನಪದ ಕ್ರೀಡೆಯ ಬಗ್ಗೆ ಒಲವು ಮೂಡಿಸಲು ಕಳೆದ 18 ವರ್ಷಗಳಿಂದ ಗ್ರಾಮೀಣ ಪ್ರದೇಶದ ಯುವಕರನ್ನು ಸೇರಿಸಿ ಈ ಕಂಬಳವನ್ನು ನಡೆಸುತ್ತಾ ಬರುತ್ತಿದ್ದೇವೆ. ಬೇರೆ ಯಾರಿಂದಲೂ ಕಂಬಳಕ್ಕಾಗಿ ಡೊನೇಶನ್ ತೆಗೆದುಕೊಳ್ಳದೆ ನಮ್ಮದೇ ತಂಡದಿಂದ ಹಣವನ್ನು ವಿನಿಯೋಗಿಸಿ ಜಿಲ್ಲೆಯಲ್ಲಿ ನಡೆಯುವ ಇತರ ದೊಡ್ಡ ಮಟ್ಟದ ಕಂಬಳಗಳಿಗೆ ಸರಿಸಮಾನವಾಗಿ ಆಯೋಜಿಸುತ್ತಿದ್ದೇವೆ ಅಲ್ಲದೆ ಪ್ರತಿ ವರ್ಷವೂ 100-120ರಷ್ಟು ಕೋಣಗಳು ಈ ಕಂಬಳದಲ್ಲಿ ಭಾಗವಹಿಸುತ್ತವೆ- ಕಂಬಳ ಸಮಿತಿಯ ಅಧ್ಯಕ್ಷ ಸುಭಾಸ್‌ಚಂದ್ರ ಚೌಟ ಕೆಲ್ಲಪುತ್ತಿಗೆ.








