ಉಳ್ಳಾಲ : ಕಾಸರಗೋಡು ಎಂದಿಗೂ ಕರ್ನಾಟಕದ ಭಾಗ, ರಸ್ತೆ ತಡೆಮಾಡಿ ಪ್ರತಿಭಟನೆ

ಉಳ್ಳಾಲ: ಕಾಸರಗೋಡು ಎಂದಿಗೂ ಕರ್ನಾಟಕದ ಭಾಗ, ಅಲ್ಲಿನ ಕನ್ನಡಿಗರ ಪರ ಧ್ವನಿ ಎತ್ತಲು ಸಾಧ್ಯವಾಗದ ಮಂಜೇಶ್ವರ ಕಾಸರಗೋಡಿನ ಇಬ್ಬರೂ ಶಾಸಕರೂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕ.ರ.ವೇ ಜಿಲ್ಲಾ ವಕ್ತಾರ ರಹೀಂ ಉಚ್ಚಿಲ್ ಹೇಳಿದ್ದಾರೆ. ಅವರು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾಸರಗೋಡು ಜಿಲ್ಲೆಯ ಗಡಿನಾಡ ಕನ್ನಡಿಗರ ಭಾಷಾ ಸ್ವಾತಂತ್ರ್ಯಕ್ಕೆ ಹಾಗೂ ಸಂವಿಧಾನ ಬದ್ಧ ಹಕ್ಕನ್ನು ಕೇರಳ ರಾಜ್ಯ ಸರಕಾರ ಕಸಿದುಕೊಳ್ಳುತ್ತಿರುವುದರ ವಿರುದ್ಧ ತಲಪಾಡಿಯಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆ ಹಾಗೂ ರಸ್ತೆ ತಡೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು ನಿರ್ನಾಮ ಮಾಡುವ ಕೇರಳ ಸರಕಾರ ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸಲು ಮುಂದಾಗಿದೆ. ಕಾಸರಗೋಡಿನ ಕನ್ನಡಿಗರು ಎಂದಿಗೂ ಅನಾಥರಲ್ಲ. ಅವರೊಂದಿಗೆ ಕರ್ನಾಟಕದ 5 ಕೋಟಿ ಜನ ಎಂದಿಗೂ ಇದ್ದೇವೆ.
ಭಾಷೆಯನ್ನು ಅಳಿಸಲು ಹೊರಟರೆ ಸಾಯುವವರೆಗೂ ಹೋರಾಡಿ ಕನ್ನಡಿಗರ ಅಸ್ತಿತ್ವವನ್ನು ಉಳಿಸುತ್ತೇವೆ. ಚುನಾವಣೆ ಸಂದರ್ಭ ಈ ಭಾಗದ ಜನರೊಂದಿಗೆ ಕನ್ನಡಿಗದಲ್ಲೇ ಮತ ಕೇಳಿದ್ದಾರೆ. ಆದರೆ ಇದೀಗ ಮಲಯಾಳಿ ಭಾಷೆ ಅಸ್ತಿತ್ವದ ಮಸೂದೆ ಜಾರಿಯಾದರೂ ಅದರ ವಿರುದ್ಧ ಧ್ವನಿ ಎತ್ತಲು ಶಾಸಕರು ವಿಫಲರಾಗಿದ್ದಾರೆ. ಮಸೂದೆ ಜಾರಿಯಾದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕೇರಳದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಹಾಕಿದರು.
ಬೀದಿಪಾಲಾಗಲಿರುವ ಕನ್ನಡ ಶಾಲೆಗಳು:
1969ರಲ್ಲಿ ಸಂವಿಧಾನದಲ್ಲಿ ಉಲ್ಲೇಖದಂತೆ ಅವರವರ ಪ್ರಾದೇಶಿಕ ಭಾಷೆಯನ್ನು ಉಪಯೋಗಿಸುವ ಮಸೂದೆಯಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಕೇರಳ ಸರಕಾರ ಜಾರಿ ಮಾಡಿರುವ ಮಸೂದೆಯಲ್ಲಿ ಎಲ್ಲಾ ಪ್ರದೇಶಗಳಲ್ಲಿ ಮಲಯಾಳಿ ಭಾಷೆಯನ್ನೇ ಕಡ್ಡಾಯವಾಗಿ ಮಲಯಾಳಿ ಭಾಷೆಯನ್ನೇ ಉಪಯೋಗಿಸುವಂತಾಗಿದೆ. ಇದರಿಂದಾಗಿ ಕರ್ನಾಟಕದ ಗಡಿನಾಡಲ್ಲಿರುವ 192 ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಅದರಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 11,400 ಮಂದಿ ವಿದ್ಯಾರ್ಥಿಗಳು ಬೀದಿ ಪಾಲಾಗಲಿದ್ದಾರೆ. ಅಲ್ಲದೆ ಈ ಭಾಗದ ಜನ ನ್ಯಾಯಾಲಯದಲ್ಲಿ ಮತ್ತು ಜಾಗದ ವಿಚಾರದಲ್ಲಿ ವ್ಯವಹರಿಸುವ ಕಡತಗಳೆಲ್ಲವೂ ಮಲಯಾಳಿ ಭಾಷೆಯಲ್ಲಿಯೇ ಇರುವುದರಿಂದ ತುಂಬಾ ಸಮಸ್ಯೆಯಾಗಿದೆ ಎಂದು ಗಡಿನಾಡು ಕನ್ನಡಿಗ ಹಾಗೂ ಶಿಕ್ಷಕ ಸದಾಶಿವ ರಾವ್ ತಿಳಿಸಿದ್ದಾರೆ.
ರಸ್ತೆ ತಡೆ ಬಂಧನ :
ಕರ್ನಾಟಕ ರಕ್ಷಣಾ ವೇದಿಕೆಯ ಸುಮಾರು 100 ರಷ್ಟು ಕಾರ್ಯಕರ್ತರು ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಅರ್ಧ ಗಂಟೆಯ ಕಾಲ ತಡೆದರು. ಈ ವೇಳೆ ಪೊಲೀಸರು ಸಮಾಧಾನಿಸಲು ಯತ್ನಿಸಿ ಬಳಿಕ ಕಾರ್ಯಕರ್ತರನ್ನು ತಡೆದು ಬಂಧನ ನಡೆಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಅನಿಲ್ ದಾಸ್, ನಝೀರ್ ಹುಸೈನ್ ಬೆಂಗ್ರೆ, ಉಡುಪಿ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ, ಸುದೇಶ್ ಶೇಟ್, ಸುಮಸೂದನ ಗೌಡ, ಅಶೋಕ್, ಸುಬ್ಬಯ್ಯ, ಎನ್.ಎ.ಹಂಝ, ಅರುಣ್ ಕುಮಾರ್, ಮೂಸಿರ್ ಅಹಮ್ಮದ್ ರಾಜೇಶ್, ಜಲೀಲ್ , ಮೊದೀನ್ ಮೊದಲಾದವರು ಉಪಸ್ಥಿತರಿದ್ದರು.















