ಬಂಟ್ವಾಳ : ಕಾಂಗ್ರೆಸ್‌ನಿಂದ 19 ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ವಿವರ
ಬಂಟ್ವಾಳ, ಫೆ. 6: ತಾಪಂಗೆ ಕಾಂಗ್ರೆಸ್ 34ರ ಪೈಕಿ 19 ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ವಿವರ ಲಭ್ಯವಾಗಿದೆ. ಉಳಿದಂತೆ 15 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸೋಮವಾರ ಬೆಳಗ್ಗೆ ಬಿಡುಗಡೆಗೊಳಿಸಲಾಗುವುದೆಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ತಿಳಿಸಿದ್ದಾರೆ. ಸಂಗಬೆಟ್ಟು- ಪ್ರಭಾಕರ ಪ್ರಭು, ಚೆನ್ನೈತ್ತೋಡಿ- ರತ್ನಾವತಿ, ಪಿಲಾತಬೆಟ್ಟು- ರಾಜೀವ ಶೆಟ್ಟಿ, ರಾಯಿ- ಮಂಜುಳಾ ಸದಾನಂದ, ಪಂಜಿಕಲ್ಲು- ಪದ್ಮಾವತಿ ಬಿ.ಪೂಜಾರಿ, ಆಮ್ಟಾಡಿ- ಮಲ್ಲಿಕಾ ವಿ.ಶೆಟ್ಟಿ, ಕಾವಳಮೂಡೂರು- ಧನಲಕ್ಷ್ಮೀ, ಉಳಿ- ಬೇಬಿ, ಕರಿಯಂಗಳ- ರಾಜು ಕೋಟ್ಯಾನ್, ಅಮ್ಮುಂಜೆ- ಶಿವಪ್ರಸಾದ್, ನರಿಕೊಂಬು- ಗಾಯತ್ರಿ, ಸಜಿಪಮುನ್ನೂರು- ನಸೀಮಾ ಬೇಗಂ, ಕಡೇಶ್ವಾಲ್ಯ- ಸುಂದರ, ಬಾಳ್ತಿಲ- ಚಂದ್ರಕಲಾ, ವೀರಕಂಭ- ಜಯಂತಿ, ಸಜಿಪಮೂಡ- ಸಂಜೀವ ಪೂಜಾರಿ, ಮಾಣಿ- ಮಂಜುಳಾ, ಕೆದಿಲ- ಆದಂ ಕುಂಞಿ, ವಿಟ್ಲಪಡ್ನೂರು- ಶೋಭಾ ರೈ.
ಗೋಳ್ತಮಜಲು ಕ್ಷೇತ್ರಕ್ಕೆ ವಾಗ್ವಾದ:ಗೋಳ್ತಮಜಲು ತಾಪಂ ಕ್ಷೇತ್ರಕ್ಕೆ ಹಾಲಿ ಸದಸ್ಯೆ ಐಡಾ ಸುರೇಶ್ ಸಚಿವ ರೈ ಅವರ ಸೂಚನೆಯ ಮೇರೆಗೆ ಶನಿವಾರ ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವೇಳೆ ಸಚಿವರ ಬಿ.ಸಿ.ರೋಡಿನ ಕಚೇರಿ ಆವರಣದಲ್ಲಿ ಅಲ್ಪಸಂಖ್ಯಾತ ಘಟಕದ ಕಲ್ಲಡ್ಕ ನಿವಾಸಿ ಕಾಂಗ್ರೆಸ್ ಮುಖಂಡರೊಬ್ಬರು ಆಕ್ಷೇಪಿಸಿ, ಇಲ್ಲಿಗೆ ಇನ್ನೋರ್ವರು ಆಕಾಂಕ್ಷಿ ಇದ್ದಾರೆ ಎಂದು ತಗಾದೆ ಎತ್ತಿದ್ದರಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಕಾಂಗ್ರೆಸ್ ಮುಖಂಡ ಐಡಾರಿಗೆ ನಾಮಪತ್ರ ಸಲ್ಲಿಕೆಗೆ ತಗಾದೆ ತೆಗೆಯುತ್ತಿದ್ದಂತೆ ಐಡಾ ಅವರ ಬೆಂಬಲಿಗರು ಇದಕ್ಕೆ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿಯು ನಡೆಯಿತಲ್ಲದೆ ಒಂದು ಹಂತದಲ್ಲಿ ಕಾಂಗ್ರೆಸ್ ಮುಖಂಡನಿಗೆ ಐಡಾ ಬೆಂಬಲಿಗರು ಹಲ್ಲೆಗೂ ಮುಂದಾದರು. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವಿದ್ಯಮಾನದಿಂದ ಮುನಿಸಿಕೊಂಡ ಐಡಾ ಸುರೇಶ್, ಒಂದೊಮ್ಮೆ ಹಿಂದೆ ಸರಿದು ಬಳಿಕ ತಮ್ಮ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ ಇನ್ನೋರ್ವ ಪ್ರಬಲ ಆಕಾಂಕ್ಷಿ ನಿರಂಜನ್ ಕುಮಾರ್ ಜೈನ್ ಕೂಡ ನಾಮಪತ್ರ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಬಿಡುಗಡೆಯಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ತಾಪಂ ಕ್ಷೇತ್ರದ ಅಧಿಕೃತ ಅಭ್ಯರ್ಥಿಯ ಹೆಸರನ್ನು ಕಾಯ್ದಿರಿಸಲಾಗಿದೆ. ಪಕ್ಷ ಯಾರಿಗೆ ಬಿ ಫಾರಂ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.







