20 ಕೋಟಿ ಮಹಿಳೆಯರಿಗೆ ಜನನಾಂಗ ಶಸ್ತ್ರಕ್ರಿಯೆ ಯೂನಿಸೆಫ್
ವಿಶ್ವಸಂಸ್ಥೆ, ಫೆ. 6: 30 ದೇಶಗಳ ಕನಿಷ್ಠ 20 ಕೋಟಿ ಬಾಲಕಿಯರು ಮತ್ತು ಮಹಿಳೆಯರು ಜನನಾಂಗ ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯೂನಿಸೆಫ್ ಗುರುವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ.
ಈ ಪೈಕಿ ಅರ್ಧದಷ್ಟು ಮಂದಿ ಈಜಿಪ್ಟ್, ಇಥಿಯೋಪಿಯ ಮತ್ತು ಇಂಡೋನೇಶ್ಯಗಳಲ್ಲಿದ್ದಾರೆ ಎಂದು ಅದು ಹೇಳಿದೆ.
ಈ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಸಂಖ್ಯೆ 2014ರಲ್ಲಿ ಅಂದಾಜಿಸಲಾದ ಸಂಖ್ಯೆಗಿಂತ ಸುಮಾರು 7 ಕೋಟಿ ಹೆಚ್ಚಾಗಿದೆ. ಕೆಲವು ದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುವುದು ಹಾಗೂ ಇಂಡೋನೇಶ್ಯದಿಂದ ಹೊಸ ಅಂಕಿಅಂಶಗಳು ಬಂದಿರುವುದು ಇದಕ್ಕೆ ಕಾರಣ ಎಂದು ಯೂನಿಸೆಫ್ ಹೇಳಿದೆ.
ಮಹಿಳೆಯರ ಜನನಾಂಗ ವಿಕೃತಗೊಳಿಸುವ ಪ್ರವೃತ್ತಿಗೆ ಜಾಗತಿಕ ನಿಷೇಧ ವಿಧಿಸಬೇಕೆಂದು ಕರೆನೀಡುವ ನಿರ್ಣಯವೊಂದನ್ನು ವಿಶ್ವಸಂಸ್ಥೆಯ ಮಹಾಧಿವೇಶನ 2012 ಡಿಸೆಂಬರ್‌ನಲ್ಲಿ ಅವಿರೋಧವಾಗಿ ಅಂಗೀಕರಿಸಿತ್ತು. ಈ ಪ್ರವೃತ್ತಿಯನ್ನು 2030ರ ವೇಳೆಗೆ ಕೊನೆಗೊಳಿಸುವ ಗುರಿಯನ್ನು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆ ಹಾಕಿಕೊಂಡಿದೆ.





