ಹೀಗೊಂದು ಕಥೆ...

ಮಂಜು
-ನಮ್ಮ ದಾವಣಗೆರೆ,
ಧಾರವಾಡ, ವಿಜಯಪುರಗಳ ಕರಿಮಣ್ಣಿನಲ್ಲಿ ಹೂವಾಗಿ ಅರಳುವ ಬಿಳಿ ಅರಳೆಯಂಥ ಮಂಜು. ಮುಗಿಲಿಂದ ನೆಲದವರೆಗೆ ಸಾಲಂಕೃತವಾಗಿ ಇಳೆಗೆ ಇಳಿದಿರುವ ಮಂಜಿನಲ್ಲಿ ಆ ಮಹಾನಗರ ಕಂಗೊಳಿಸುತಿತ್ತು ಶ್ವೇತ ಸುಂದರಿಯಂತೆ. ಗಂಗಾಧರನ ಧವಳ ಗಂಗೆಗೂ, ‘ಸ್ವಲ್ಪ ನಿಲ್ಲಿ ಮೇಡಮ್ ಇನ್ನೂ ಟ್ರಾಫಿಕ್ ಕ್ಲಿಯರ್ ಆಗಿಲ್ಲ’ ಎನ್ನುವಂಥ, ದಟ್ಟವಾಗಿ ಕವುಚಿಕೂಂಡಿದ್ದ ಮಂಜು. ಸ್ವತ: ಹಿಮವಂತನೇ ಧರೆಗಿಳಿದು ಬರುತ್ತಿರುವ ಧಾವಂತದ ಮಂಜು. ಇಂಥದೊಂದು ಹಿಮಾಚ್ಛಾದಿತ ನಗರದ ಹೃದಯ ಭಾಗವೋ ಶಿಖಾರಗ್ರವೋ ಆದ ಪ್ರದೇಶ. ಶಿಶಿರದಲ್ಲಿ ಬೋಳಾಗಿ ನಿಂತ ಒಂದು ಕೊರಡು ಮರ. ಶುಭ್ರಶ್ವೇತ ಮಂಜಿನುಡಿಗೆ ತೊಟ್ಟಿದ್ದ ಮರದ ಟೂಂಗೆಯ ಮೇಲೆ ಕುಳಿತಿತ್ತು ಒಂದು ಅನಾಥ ಪಕ್ಷಿ.
’ಭೂಮೀನ್ ತಬ್ಬಿದ್ ಬಾನಿದ್ದಂಗೆ’ ಅಂತ ಕನ್ನಡ್‌ರತ್ನ ಹಾಡ್ದಂಗೆ ಮಂಜು ಆವರಿಸಿಕೊಂಡಿದ್ದ ಆ ಹಿಮಾವೃತ ಮಹಾನಗರದ ಒಂದು ಅಂಚಿನಲ್ಲಿ ಅಸ್ಪಷ್ಟ ಆಕೃತಿಯೊಂದು ವಿಹಂಗಮ ನೋಟಕ್ಕೆ ಎದುರಾಯಿತು.
ಯಾರದು?
ಯಾರು ನಿಂದವರಲ್ಲಿ ತಾಯೇ?
.......................
ಬಿಳಿಯೆಂಬೋ ಬಿಳಿ ಬರ್ಫದಲಿ ಅಂತರ್ಗತವಾಗಿರುವ ಶರೀರ. ಶಿಲಾ ಪ್ರತಿಮೆಯಂತಿರುವ ಸ್ತ್ರೀ ಮುಖ. ಮುಖ ಮಾತ್ರ ಕಾಣಿಸುತ್ತಿದೆ.
ಭುವನೈಕ ಸುಂದರಿ! ಎಂಥ ಕಣ್ಣು, ಎಂಥಾ ಕಣ್ಣು! ಪ್ರೀತಿ-ವಾತ್ಸಲ್ಯಗಳ ಕಿರಣ ಸೂಸುವ ದಿವ್ಯ ನಯನ. ಜಗತ್ತಿನ ವಾಸನೆಗಳನ್ನೆೆಲ್ಲ ಗ್ರಹಿಸಿ ಮಿಡುಕುತಿರುವ ಸಂಪಿಗೆಯ ಎಸಳಂಥ ನಾಸಿಕ. ‘ಜಗವೆಲ್ಲ ನಗುತಿರಲಿ, ಜಗದಳಲು ಎನಗಿರಲಿ’ ಎಂದು ಪ್ರಪಂಚದ ನೋವುನಲಿವುಗಳಿಗೆ ತೆರೆದ ಕಿವಿಗಳು. ಮಿರಮಿರ ಮಿರುಗುವ ಕೇಶ ರಾಶಿ. ಹಣೆಯಲ್ಲಿ ಭ್ರುಕುಟಗಳ ಮಧ್ಯೆ ಕಾಸಿನಗಲದ ಕುಂಕುಮ. ಥೇಟ್ ಅಮ್ಮನಂತೆಯೇ.
ಅಮ್ಮನೇ! ಆದರೆ ಅವಳು ಇಂದು ಎಂದಿನಂತೆ ಕಾಣುತ್ತಿಲ್ಲ. ಮುಖದಲ್ಲಿ ಮಡುಗಟ್ಟಿದ ದು:ಖ.
ಅಮ್ಮನೇ? ಯಾರಿವಳು? ಏನವಳ ದು:ಖ-ದುಮ್ಮಾನ?
‘ಯಾರು ನಿಂದವರಲ್ಲಿ ತಾಯೇ!’
-ದುಗುಡ ತುಂಬಿದ ಮುಖ, ತುಂಬಿ ಬಂದ ಕಣ್ಣಾಲಿಗಳು.
ಏಕೀ ದುಗುಡ? ತಾಯ ಕಣ್ಣಾಲಿಗಳ ಹಿಂದೆ ಎಂಥ ದು:ಖ ಸಾಗರವದ್ದೀತು? ಏಕೀ ಖಿನ್ನತೆ ತಾಯ ಮುಖದಲ್ಲಿ?
ಹೇಳು ತಾಯಿ ನಿನ್ನ ದುಃಖವಾದರೂ ಏನು? ಬೆಳಗಾದರೆ ಜ.26, ಹಬ್ಬ. ಗಣತಂತ್ರ ಫಲಿಸಿದ ಉತ್ಸವ. ಇಡೀ ಮಹಾನಗರ ನವ ವಧುವಿನಂತೆ ಸಿಂಗರಿಸಿಕೂಂಡು ನಿಂತಿದೆ ಉತ್ಸವಕೆ. ದೇಶದಲ್ಲೆಲ್ಲ ಸಡಗರ-ಸಂಭ್ರಮ, ಲೀಲಾವಿನೋದಗಳು. ಈ ಹಿಗ್ಗಿನಲಿ ನೀನೂ ಸಂತಸದಿಂದಿರಬೇಡವೇ?
ಹೌದು ಬಾಳ, ನವ ವಧುವಿನಂತೆ ಸಿಂಗರಿಸಿಕೂಂಡು ನಿಂತಿದೆ ರಾಜಧಾನಿ, ಇನ್ನೊಬ್ಬಳು ನಿರ್ಭಯಳಾಗಲು..
ಬೇಡ ತಾಯಿ, ಭಯ ಬೇಡ ...ನಮ್ಮದು ‘ಯತ್ರ ನಾರ್ಯಂತು.....’ ಪರಂಪರೆ...ಒಂದೆರಡು ಪಥಭ್ರಂಶಗಳಷ್ಟೆ...
ಒಂದೆರಡು.....
ಬೇಸರದ ದನಿ ಏಕೆ? ಏಕೀ ದುಗುಡದುಮ್ಮಾನ?
ಏನೆಂದು ಹೇಳಲಿ ಬಾಳ? ಬಾಳೆಂಬುದು ಸೆರಗಿನ ಕೆಂಡವಾಗಿಹುದು?
ಏಕೆ ತಾಯಿ? ಆಸರೆ ಆರೈಕೆಗೆ ಮಕ್ಕಳಿಲ್ಲವೇ? ತಂಪೆರೆಯಲು...
ಇಲ್ಲವೆನ್ನಲು ನಾಲಿಗೆಯು ಒಪ್ಪದು, ಶತ ಕೋಟಿಗೂ ಮಿಕ್ಕ ಸಂಪದ್ಭರಿತ ಒಡಲ ವಸುಂಧರೆ ನಾನು
ಪುಣ್ಯವಂತಳು ತಾಯಿ ನೀನು. ಅಷ್ಟಲ್ಲದೆ ನಿನ್ನನು ‘ರತ್ನಗರ್ಭಾ ವಸುಂಧರಾ’ ಎನ್ನುತ್ತಾರೆಯೇ ತಾಯಿ
ಹೌದು ಬಾಳ, ನನ್ನ ಮಕ್ಕಳು ಮುತ್ತುರತ್ನಗಳೇ! ನೀನಾದರೂ ಅಷ್ಟೆ. ಎಂಥ ಪ್ರೀತಿ, ಎಂಥ ಅಭಿಮಾನ
ಅದೆಂಥ ಸುದೈವಿ ನೀನು.......ನಿನ್ನ ಕೊರಳಲಿ ಮಿಂಚುವ ಪವನುಗಟ್ಟಳೆ ಬಂಗಾರವೇ ಸಾಲದೆ ನಿನ್ನ ಎಣೆಯಿಲ್ಲದ ಸುದೈವ ಸಾರಲು?
ಏನು ಸುದೈವವೋ....
ಹಾಗೇಕೆ ಬೇಸರಿಸುವೆ ತಾಯಿ. ನೋಡು, ಅನ್ನಭಾಗ್ಯ, ಜನಧನಮೇಕಿನ್ನು ಫಾರಿನ್ನುಸ್ಟಾರ್ಟಅಪ್ಪುಸುಕನ್ಯಾ ಸಸ್ಯ ಶ್ಯಾಮಲ ಮುದ್ರಲೋಪಮುದ್ರಾ... ಏನೆಲ್ಲ ಪದಕ, ಪೆಂಡೆಂಟುಗಳಿಂದ ನಿನ್ನ ಕೊರಳನಲಂಕರಿಸಿದ್ದಾರೆ ನೋಡು ನಿನ್ನ ಸುಪುತ್ರರು, ಬೇರಾವ ಅಬ್ಬೆಗುಂಟು ಈ ಆಅಗ್ಯ? ಎಂಥ ಭಾಗ್ಯವಂತಳು ತಾಯಿ ನೀನು
ಇನ್ನೂ ಏನೆಲ್ಲ ಉಂಟು ಗೋತ್ತುಂಟ ಬಾಳ? ನನ್ನ ಪುತ್ರಿಯರಿಗೆ ತಾಳಿ ಭಾಗ್ಯ, ಸ್ವಚ್ಛಭಾಗ್ಯ ....
ಮತ್ತಿನ್ನೇಕೆ ಶೋಕ? ಮಕ್ಕಳೀ ಸಾಧನೆಗೆ ಸಂತೋಷ ಪಡಬೇಡವೇ?
ಇತ್ತೀಚಿನ ದಿನಗಳ ನೋಟ ಈ ತಾಯಿ ಕರುಳನ್ನ ಕಂಗೆಡಿಸಿದೆ ಬಾಳ...
ಏನು ನೋಟವದು ತಾಯಿ?
ಅಲ್ಲಿ ಉತ್ತರದಲ್ಲಿ, ಗೋಧ್ರಾದಿಂದ ದಾದ್ರಿವರೆಗೆ, ಇತ್ತ ದಕ್ಷಿಣದ ವೇಮನನ ನಾಡಿನಲ್ಲಿ ನನ್ನ ಅಸಹಾಯಕ ಮಕ್ಕಳ ಕಗ್ಗೂಲೆ...ರಾಜಧಾನಿಯಲ್ಲಿ ಹಾಡಹಗಲೂ ನನ್ನ ಹೆಂಗೂಸುಗಳ ಶೀಲ ಸುಭದ್ರವಲ್ಲ....ಹುಟ್ಟುವ ಮೊದಲೇ ಹೆಂಗೂಸುಗಳ ಹತ್ಯೆ....ದೈವ ಉಳಿಸಿದರೂ ಮರ್ಯಾದಾ ಹತ್ಯೆ....ಬವಳಿ ಬರುವಂತಾಗುತಿದೆ ಬಾಳ
ಚಿಂತಿಸದಿರು ತಾಯಿ. ಗ್ರಹಗತಿಯ ದೋಷವಿದ್ದೀತು.
ವೇಮನ ಹುಟ್ಟಿದ ನೆಲದಲ್ಲಿ ರೋಹಿತ್ ವೇಮುಲಾನನ್ನು ಕೊಂದವರು ಯಾರು? ನನ್ನ ದ್ರಾವಿಡದ ಮೂವರು ಹೆಂಗೂಸಿಗಳನ್ನು ಬಾವಿಗೆ ನೂಕಿದವರು ಯಾರು? ದಾದ್ರಿಯ ಅಮಾಯಕನನ್ನು ಕೊಂದವರು ಯಾರು? ನನ್ನ ರೈತಮಕ್ಕಳ ಆತ್ಮಹತ್ಯೆಗೆ ಯಾರು ಹೂಣೆ? ಒಂದೂ ತಿಳಿಯದಂತಾಗಿದೆ. ಭೀಮ ಶಕ್ತಿಯಿಂದಲೂ ಇದನ್ನೆಲ್ಲ ತಡೆಯಲಾಗಲಿಲ್ಲಿ ಎಂದರೆ... ಎಲ್ಲ ಅಯೋಮಯವಾಗುತ್ತಿದೆ...
ಕೊಂಚ ಸಾವರಿಸಿಕೊ ತಾಯಿ
ಹೇಗೆ ಸಾವರಿಸಿಕೊಳ್ಳುವುದು? ನಿತ್ಯ ನನ್ನ ದೀನದಲಿತ ಮಕ್ಕಳ ಹತ್ಯೆ, ಹಕ್ಕುಗಳ ಹರಣ, ನನ್ನ ಸುಪುತ್ರಿಯರಿಗೆ ದೇವರ ಗುಡಿ, ಮಸೀದಿಯೊಳಗೆ ಹೋಗುವ ಹಕ್ಕಿಗೂ ಈಗ ಹಕೀಕತ್ತು ಎಂದರೆ... ಭೀಮನ ಅಂಗರಚನೆ ಏನಾಯ್ತು?
ಅಣುಗರ ತುಂಟಾಟವೆಂದು ಹೊಟ್ಟೆಗ್ಹಾಕಿಕೊ ತಾಯಿ
ಹೇಗೆ ಬಾಳ,... ತಾಯಿ ಅಂಬೋಳು ಮಕ್ಕಳ ಎಷ್ಟು ತಪ್ಪುಗಳ ಹೂಟ್ಟೇಲಿ ಹಾಕಿಕೂಂಡಿಲ್ಲ...ಈಗ ಈ ನನ್ನ ಕೂಸು,
‘ನನ್ನ ಜನನವೊಂದು ಮರಣಾಂತಿಕ ಆಕಸ್ಮಿಕ’ ಎಂದ ರೋಹಿತನ ಮಾತುಗಳ ನುಂಗಿಕೊಳ್ಳುವುವುದೆಂತು?, ದಲಿತ ವಿದ್ಯಾರ್ಥಿಗಳೆಲ್ಲ ವಿದ್ಯಾರ್ಥಿಗಳಾಗಿರುವಾಗ, ‘ದಲಿತ ವಿದ್ಯಾರ್ಥಿಗಳ ಕೂಠಡಿಗಳಿಗೆ ನೇಣಿನ ಹಗ್ಗ ಒದಗಿಸಬೇಕು’ ಎನ್ನುವ ಅವನ ಬೇಡಿಕೆಯಲ್ಲಿ ಆಶ್ಚರ್ಯವೇನಿದೆ ಬಾಳ?
ಹುಡುಗ ಖಿನ್ನತೆಯಲ್ಲಿ ಆ ಮಾತನಾಡಿರಬೇಕು ತಾಯೇ?
ಖಿನ್ನತೆ ನನ್ನ ತಾರಾ ಮಕ್ಕಳಿಗೂ ಬರುತ್ತದೆ. ದೀಪಿಕಾ ಪ್ರಕೋಪಿಕಾ ಸಾರಿಕಾಸೋಪಿಕಾ ಇತ್ಯಾದಿ ನಕ್ಷತ್ರಗಳೆಲ್ಲ ‘ಖಿನ್ನತಾ’ಗಳೇ. ಈ ಶ್ರೀಮಂತ ತಾರೆಯ ಖಿನ್ನತೆಗೂ ರೋಹಿತನಂಥ ದಲಿತರ ಖಿನ್ನತೆಗೂ ವ್ಯತ್ಯಾಸವಿಲ್ಲವೇೆ ಬಾಳ? ವಾಸ್ತವಿಕತೆ ಏನು? ವಸ್ತುಸ್ಥಿತಿ ಏನು? ಹಾಗಿದ್ದಲ್ಲಿ ನಾನು ಕಾಣುತಿರುವ ಈ ದೌರ್ಭಾಗ್ಯಗಳೆಲ್ಲ ಹಳವಂಡವೇ, ದುಃಸ್ವಪ್ನವೇ?
ದುಃಸ್ವಪ್ನವೆಂದೇ ತಿಳಿ ತಾಯಿ...ನಿನ್ನ ಸುಪುತ್ರರಲ್ಲಿ ನಂಬಿಕೆ ಇರಲಿ, ಎಲ್ಲ ಸರಿಹೋದೀತು..
ಇಷ್ಟೆಲ್ಲ ಕಕ್ಕುಲಾತಿಯ ನೀನಾದರೂ ಯಾರು ಬಾಳ?
ನಾನೊಂದು ಹಾಡು ಹಕ್ಕಿ ತಾಯೆ
ಎಲ್ಲೋ ಮಗು ಅಳುತಿದೆ ಎಂದು ಅಂದು ಹಾಡಿದವ ನೀನೆ ಅಲ್ಲವೇ!
...ಅಳು ನಿಂತಿಲ್ಲ. ಎಲ್ಲೋ ಮಗು ಅಳುತಿದೆ...ಅಳು...ಆಕ್ರಂದನ...ಏನು ಹಸಿವೋ, ಯಾತರ ಭೀತಿಯೋ? ಕಟ್ಟಕಡೆಯ ನನ್ನ ಕಂದಮ್ಮಗಳ ಅಳು ನಿಂತಿಲ್ಲ. ಅವರು ಮನುಷ್ಯರಾಗುವುದೆಂದೋ?
ಅಷ್ಟೊಂದು ಹತಾಶೆ ಬೇಡ ತಾಯೆ...
ನಾನೊಂದು ಮಾತ ಕೇಲೇ ಬಾಳ?
ಕೇಳು ತಾಯಿ
ನನ್ನ ಮಾನ ಕಾಯುವಿಯಾ? ನನ್ನೀ ಮಕ್ಕಳ ಪ್ರಾಣ ಕಾಯುವಿಯಾ?
ತಾಯ ಮಾನ ಕಾಯಲೆಂದು ಅದೆಷ್ಟು ಮಂದಿ ಶಿವಗಾಮಿಗಳಾಗಿಲ್ಲ ತಾಯಿ
ಅದು ಹಳೆಯ ಮಾತಾಯ್ತು ಬಾಳ. ಹಿಂದೂಮ್ಮೆ ಹೀಗೆ ನಿನ್ನಂಥ ಹಾಡು ಹಕ್ಕಿ. ನವೋದಯದ ಬೆಳಗಿನ ಹಕ್ಕಿ. ಆ ಪರಂಪರೆಯವನೇ ಇರಬೇಕು ನೀನು. ನಾ ಕೇಳಿದ್ದೆ ಆ ಹಕ್ಕಿಯ: ‘ಗಂಡುಸಾದರೆ ನಿನ್ನ ಬಲಿ ಕೂಡುವೆಯೇನು?’........
ಬಲಿಯ ಮಾತು ಈಗೇಕೆ ತಾಯಿ? ಆ ಮಾತು ಬೇಡ
***
ಬಲಿ...ಬಲಿ ಎಂದು ಕನವರಿಸುತ್ತಲೇ ಎಚ್ಚರಗೂಂಡಿದ್ದೆ. ಬೆಳಕು ಹರಿದಿತ್ತು.
***
ಭರತ ವಾಕ್ಯ:
ಅಂದು ಕವಿ ಮನ ನಡುಗಿತ್ತು
ತಾಯ ಪಂಥಾಹ್ವಾನಕೆ.
ಇಂದೂ ಅದೇ ಪಂಥಾಹ್ವಾನವೇ/
ಮಕ್ಕಳಲಿ ವಿಶ್ವಾಸವಿರಲಿ ತಾಯಿ.
ಕವಿದ ಮಂಜು ಕರಗುತಿದೆ
ರವಿ ಕಿರಣ, ಹೂಂಗಿರಣ ಮೂಡುತಿದೆ
ಹೊಸ ಭರವಸೆಯ ಬೆಳಕು.
-------------
ವೇಮನ ತೆಲುಗಿನ ದಾರ್ಶನಿಕ ಕವಿ.
‘ಗಂಡುಸಾದರೆ ನಿನ್ನ ಬಲಿ ಕೊಡುವೆಯೇನು?’ ಬೇಂದ್ರೆಯವರ ‘ಕನಸಿನೂಳಗೂಂದು ಕಣಸು’ ಕವನದ ಸಾಲು.







