ಲೈಂಗಿಕ ಶೋಷಣೆ; ಮಹಿಳಾ ದೂರು ಸಮಿತಿ ರಚಿಸಿ: ಡಿಸಿ ಪಾಲಯ್ಯ
ಬೆಂಗಳೂರು, ಫೆ. 6: ಜಿಲ್ಲೆಯಲ್ಲಿ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಆಗುವ ಲೈಂಗಿಕ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಪಂಚಾಯತ್ ಮಟ್ಟದ ಕಚೇರಿಗಳಲ್ಲಿ ಆಂತರಿಕ ಮಹಿಳಾ ದೂರು ಸಮಿತಿಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಜರಗಿದ ದೌರ್ಜನ್ಯ, ಶೋಷಣೆ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೀಡಿದ ಸೂಚನೆ ಹಾಗೂ ನಿರ್ದೇಶನದಂತೆ ಕ್ರಮ ಕೈಗೊಳ್ಳುವ ವಿಚಾರವಾಗಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳ ಮೇಲೆ ಜರಗಿದ ದೌರ್ಜನ್ಯ, ಶೋಷಣೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸರಕಾರದಿಂದ ದೊರೆಯುವ ಪರಿಹಾರ ಸೌಲಭ್ಯಗಳನ್ನು ಪಡೆಯಲು ಘಟನೆ ನಡೆದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಥವಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಸುವಂತೆ ಸಂತ್ರಸ್ತರಿಗೆ ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆಯರು, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಕುರಿತು ಮಾಹಿತಿ ನೀಡಲು ಅಂಜಿಕೆಯಿಂದ ಹಿಂಜರಿಯುತ್ತಾರೆ. ಈ ಬಗ್ಗೆ ಏನಾದರೂ ಅಧಿಕಾರಿಗಳಿಗೆ ಮಾಹಿತಿ ತಿಳಿದು ಬಂದರೆ, ವಿಷಯವನ್ನು ಗೌಪ್ಯವಾಗಿ ಇಟ್ಟಿರುತ್ತೇವೆ ಎಂಬ ಬಗ್ಗೆ ಭರವಸೆ ನೀಡಿ, ಪ್ರಕರಣಗಳನ್ನು ದಾಖಲಿಸುವಂತೆ ಮನವೊಲಿಸಿ, ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂತ್ರಸ್ತರಿಗೆ ಅರಿವು ಮೂಡಿಸಬೇಕೆಂದರು. ದೌರ್ಜನ್ಯದ ಸಂತ್ರಸ್ತರು ಆಸ್ಪತ್ರೆಗಳಿಗೆ ದಾಖಲಾದಾಗ ಮೊದಲು ಪ್ರಥಮ ಚಿಕಿತ್ಸೆ ನೀಡಿ ನಂತರ ಪ್ರಕರಣಗಳನ್ನು ದಾಖಲು ಮಾಡುವಂತೆ ತಮ್ಮ ಅಧೀನ ಆಸ್ಪತ್ರೆಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಚಿಸಿದರು.
ಹೆಣ್ಣು ಮಕ್ಕಳು ಹೆಚ್ಚಾಗಿರುವ ಶಾಲಾ- ಕಾಲೇಜುಗಳಲ್ಲಿ ಸಿಸಿವಿಟಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಸದನ ಸಮಿತಿಯು ಸೂಚಿಸಿರುವ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಬಾಲಕಾರ್ಮಿಕರಿಗೆ ಮಾಸಾಶನ ಮಂಜೂರು ಮಾಡಿರುವುದಿಲ್ಲ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ರಮೇಶ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಜರಗುವ ದೌರ್ಜನ್ಯ, ಶೋಷಣೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾಮಟ್ಟ, ತಾಲೂಕುಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಬೇಕೆಂದರು. ಸಮಾಜ ಕಲ್ಯಾಣಾಧಿಕಾರಿ ಎಂ.ಎ.ಶ್ರೀನಿವಾಸ್, ುಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







