ನೌಕಾಪಡೆಯ ಶಕ್ತಿ ಪ್ರದರ್ಶನ

♦ 50 ರಾಷ್ಟ್ರಗಳು ಭಾಗಿ ♦ ರಾಷ್ಟ್ರಪತಿ ಸಮೀಕ್ಷೆ
ವಿಶಾಖಪಟ್ಟಣಂ, ಫೆ.6: ಭಾರತೀಯ ನೌಕಾಪಡೆಯ ಯುದ್ಧ ಸನ್ನದ್ಧತೆ ಮತ್ತು ಶಕ್ತಿ-ಸಾಮರ್ಥ್ಯಗಳ ಪ್ರದರ್ಶನದ ಅಂಗವಾಗಿ ಆಯೋಜಿಸಲಾದ ಅಂತಾ ರಾಷ್ಟ್ರೀಯ ನೌಕಾಪಡೆ ಪರಾಮರ್ಶೆ (ಐಎಫ್‌ಆರ್)- 2016ರಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದ 50 ರಾಷ್ಟ್ರಗಳ ನೌಕಾಪಡೆಗಳ ನೌಕೆಗಳ ಸಮೀಕ್ಷೆಯನ್ನು ರಾಷಟ್ಟೆಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ನಡೆಸಿದರು.
ಭಾರತೀಯ ನೌಕಾಪಡೆಯ ಪ್ರತಿಷ್ಠಿತ ಗಸ್ತುನೌಕೆ ‘‘ಐಎನ್‌ಎಸ್ ಸುಮಿತ್ರಾ’’ದ ಮೂಲಕ ಅವರು ಯುದ್ಧನೌಕೆಗಳ ಸಮೀಕ್ಷೆ ನಡೆಸಿದರು.
ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಯವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಮತ್ತು ಇತರ ಗಣ್ಯರು ಈ ನೌಕಾಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಇದು ಸ್ವಾತಂತ್ರಾನಂತರ 11ನೆ ನೌಕಾಪಡೆ ಪರಾಮರ್ಶೆಯಾಗಿದ್ದು, ಭಾರತದಲ್ಲಿ ನಡೆಯುತ್ತಿರುವ ಎರಡನೆ ಐಎಫ್‌ಆರ್ ಆಗಿದೆ.
ಇಲ್ಲಿಯ ಬಂಗಾಲ ಕೊಲ್ಲಿಯ ತೀರದಲ್ಲಿ ಲಂಗರು ಹಾಕಿದ್ದ 70 ಯುದ್ಧನೌಕೆಗಳ ಎದುರಿನಿಂದ ರಾಷ್ಟ್ರಪತಿ ಮತ್ತು ಇತರ ಗಣ್ಯರನ್ನು ಹೊತ್ತಿದ್ದ ಐಎನ್‌ಎಸ್ ಸುಮಿತ್ರಾ ಗಂಭೀರವಾಗಿ ಸಾಗಿತು. ನೌಕೆಗಳ ಪರಾಮರ್ಶೆಯ ಬಳಿಕ ಮಾತನಾಡಿದ ಮುಖರ್ಜಿ, 50 ಮಿತ್ರರಾಷ್ಟ್ರಗಳ ನೌಕಾಪಡೆಗಳಿಗೆ ಸೇರಿದ ನೌಕೆಗಳು ಮಹಾಸಾಗರಗಳನ್ನು ದಾಟಿ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಮೊದಲ ಐಎಫ್‌ಆರ್‌ನಲ್ಲಿ ಪಾಲ್ಗೊಂಡಿವೆ ಎಂದು ಹೇಳಿದರು.
ಭಾರತೀಯ ನೌಕಾಪಡೆಯ ಶಕ್ತಿ-ಸಾಮರ್ಥ್ಯವನ್ನು ಪ್ರಮುಖವಾಗಿ ಬಿಂಬಿಸುತ್ತಿರುವ ಐಎಫ್‌ಆರ್-2016 ವಿಶ್ವಾದ್ಯಂತದ ನೌಕಾಪಡೆಗಳನ್ನು ಭಾರತದ ಕಡಲ ತೀರದಲ್ಲಿ ಒಗ್ಗೂಡಿಸಿದೆ. ಇದು ಸಮುದ್ರವನ್ನು ಶಾಂತಿ,ಸಹಕಾರ ಮತ್ತು ಮೈತ್ರಿಯನ್ನು ಉತ್ತೇಜಿಸುವ ಹಾಗೂ ಸುರಕ್ಷಿತ ಸಾಗರ ಭವಿಷ್ಯಕ್ಕಾಗಿ ಸಹಭಾಗಿತ್ವವನ್ನು ಹೆಚ್ಚಿಸುವ ನಮ್ಮ ಸಮಾನ ಉದ್ದೇಶವನ್ನು ಪ್ರಮುಖವಾಗಿ ಬಿಂಬಿಸುತ್ತಿದೆ ಎಂದು ನುಡಿದರು.
ಪರಾಮರ್ಶೆಯಲ್ಲಿ ಭಾರತೀಯ ನೌಕಾಪಡೆ ಮತ್ತು ವಿಶ್ವಾದ್ಯಂತದ ಅಗ್ರ ನೌಕಾಪಡೆಗಳ ನೌಕೆಗಳು ಸಮ್ಮಿಲನಗೊಂಡಿದ್ದವು. ಭಾರತೀಯ ತಟ ರಕ್ಷಣಾ ಪಡೆ ಮತ್ತು ವಾಣಿಜ್ಯ ನೌಕೆಗಳೂ ಭಾಗಿಯಾಗಿದ್ದವು.
ಭಾರತೀಯ ನೌಕಾಪಡೆಯ ವಾಯು ಘಟಕದ ವೈಮಾನಿಕ ಪ್ರದರ್ಶನವನ್ನೂ ರಾಷ್ಟ್ರಪತಿಗಳು ವೀಕ್ಷಿಸಿದರು.
ಪರಾಮರ್ಶೆಯ ಅಂತಿಮ ಹಂತದಲ್ಲಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸಾಲುಸಾಲಾಗಿ ರಾಷ್ಟ್ರಪತಿಗಳ ನೌಕೆಯ ಎದುರಿನಿಂದ ಸಾಗಿದವು.







