ಸರಕಾರದ ಕೃಪಾಕಟಾಕ್ಷ ಪಡೆದಿಲ್ಲ

ಗುಜರಾತ್ ಮುಖ್ಯಮಂತ್ರಿ ಪುತ್ರಿ ಅನಾರ್
ಅಹ್ಮದಾಬಾದ್, ಫೆ.6: ತಾನು ರಾಜ್ಯ ಸರಕಾರದಿಂದ ಅನುಚಿತ ಸೌಲಭ್ಯಗಳನ್ನು ಪಡೆದುಕೊಂಡಿದ್ದೇನೆ ಎಂಬ ಕಾಂಗ್ರೆಸ್ ಆರೋಪಗಳನ್ನು ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ಪುತ್ರಿ ಅನಾರ್ ಪಟೇಲ್ ಅವರು ಶನಿವಾರ ತಳ್ಳಿಹಾಕಿದ್ದಾರೆ. ತನ್ನ ವ್ಯವಹಾರ ಪಾಲುದಾರರೊಂದಿಗೆ ಸೇರಿಕೊಂಡು ತಾಯಿಯ ಪ್ರಭಾವವನ್ನು ಬಳಸಿಕೊಂಡು ಜುಜುಬಿ ಬೆಲೆಯಲ್ಲಿ ಸರಕಾರಿ ಭೂಮಿಯನ್ನು ಕೊಳ್ಳೆ ಹೊಡೆದಿದ್ದೇನೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅನಾರ್ ನಿರಾಕರಣೆ ಹೊರಬಿದ್ದಿದೆ.
ರಾಜ್ಯ ಬಿಜೆಪಿ ಘಟಕವೂ ಅನಾರ್ ಬೆಂಬಲಕ್ಕೆ ಧಾವಿಸಿದೆ. ಮುಖ್ಯಮಂತ್ರಿ ಮತ್ತು ಅವರ ಪುತ್ರಿಯ ಮೇಲೆ ಆರೋಪಗಳನ್ನು ಹೊರಿಸುವ ಮೂಲಕ ಅವರಿಗೆ ಕಳಂಕ ಹಚ್ಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ತಾನು ವೈಲ್ಡ್‌ವುಡ್ ರೆಸಾರ್ಟ್ಸ್ ಆ್ಯಂಡ್ ರಿಯಾಲ್ಟೀಸ್,ಅನಿಲ್ ಇನ್‌ಫ್ರಾ ಮತ್ತು ಪಾರ್ಶ್ವ ಟೆಕ್ಸ್‌ಕೆಮ್ ಕಂಪೆನಿಗಳ ನಿರ್ದೇಶಕಿಯೂ ಅಲ್ಲ,ಅವುಗಳಲ್ಲಿ ಶೇರುಗಳನ್ನೂ ಹೊಂದಿಲ್ಲ. ವೈಲ್ಡ್‌ವುಡ್‌ಗೂ ತನಗೂ ಯಾವುದೇ ಸಂಬಂಧವಿಲ್ಲ. ಯಾರು ಬೇಕಾದರೂ ಸರಕಾರದ ಮಟ್ಟದಲ್ಲಿ ಇದನ್ನು ದೃಢಪಡಿಸಿಕೊಳ್ಳಬಹುದು ಎಂದು ಅನಾರ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅನಿಲ್ ಇನ್‌ಫ್ರಾದ ಅಮೋಲ್ ಶ್ರೀಪಾಲ್ ಸೇಠ್ ಜೊತೆ ವೈಲ್ಡ್‌ವುಡ್‌ನ ಒಡೆತನ ಹೊಂದಿರುವ ದಕ್ಷೇಶ್ ಪಟೇಲ್ ತನ್ನ ವ್ಯವಹಾರ ಪಾಲುದಾರರು ಎನ್ನುವುದು ನಿಜ. ಆದರೆ ಅವರ ಎಲ್ಲ ಕಂಪೆನಿಗಳಲ್ಲಿ ತಾನಿದ್ದೇನೆ ಎಂದು ಅದರ ಅರ್ಥವಲ್ಲ. ಅವರು ಸ್ವಂತ ಪರಿಶ್ರಮದಿಂದ ಮೇಲೆ ಬಂದವರು ಮತ್ತು ಕಳೆದ 22 ವರ್ಷಗಳಿಂದಲೂ ಉದ್ಯಮದಲ್ಲಿದ್ದಾರೆ ಎಂದು ಅನಾರ್ ವಿವರಿಸಿದ್ದಾರೆ. ತಾನು ಮತ್ತು ದಕ್ಷೇಶ್ ಏಳು ವರ್ಷಗಳ ಹಿಂದೆ ‘‘ಅನಾರ್ ಪ್ರಾಜೆಕ್ಟ್ಸ್’’ ಕಂಪನಿಯನ್ನು ಆರಂಭಿಸಿದ್ದು, ಎಂದೂ ಯಾವುದೇ ಸರಕಾರಿ ಸಂಸ್ಥೆಯಿಂದ ನ್ಯಾಯ ಮೀರಿ ನೆರವನ್ನು ಪಡೆದುಕೊಂಡಿಲ್ಲ. ಎಲ್ಲ ರೀತಿಯಲ್ಲಿಯೂ ಎಲ್ಲ ನಿಯಮಾವಳಿಗಳನ್ನು ಅನುಸರಿಸಿದ್ದೇವೆ ಎಂದು ಬರೆದುಕೊಂಡಿರುವ ಅನಾರ್,ತನ್ನ ಮೇಲಿನ ವೈಯಕ್ತಿಕ ದಾಳಿಗೆ ನೋವು ವ್ಯಕ್ತಪಡಿಸಿದ್ದಾರೆ.
2010ರಲ್ಲಿ ರಾಜ್ಯದ ಕಂದಾಯ ಸಚಿವೆಯಾಗಿದ್ದಾಗ ಆನಂದಿ ಬೆನ್ ಪಟೇಲ್ ಅವರು ಅನಾರ್ ಜೊತೆ ನಿಕಟ ವ್ಯವಹಾರ ಸಂಪರ್ಕ ಹೊಂದಿರುವ ಕಂಪನಿಗೆ 122 ಕೋ.ರೂ.ವೌಲ್ಯದ ಭೂಮಿಯನ್ನು ಕೇವಲ 1.49ಕೋ.ರೂ.ಗೆ ಮಂಜೂರು ಮಾಡಿದ್ದರು ಎಂದು ಆರೋಪಿಸಿರುವ ಕಾಂಗ್ರೆಸ್ ಅವರ ರಾಜೀನಾಮೆಗೆ ಆಗ್ರಹಿಸಿದೆ.







