ಸರಕಾರದಿಂದ ಸಕಾಲ ಯೋಜನೆಯ ನಿರ್ಲಕ್ಷ: ಆರೋಪ
ಬೆಂಗಳೂರು, ಫೆ.6: ಸಾರ್ವಜನಿಕರ ಸಮಸ್ಯೆಗಳಿಗೆ ವೇದಿಕೆಯಂತಿರುವ ಸಕಾಲ ಯೋಜನೆಯನ್ನು ಸರಕಾರ ನಿರ್ಲಕ್ಷಿಸಿದ್ದರ ಪರಿಣಾಮವಾಗಿ ರಾಜ್ಯದಲ್ಲಿ ವಾರ್ಷಿಕ 5 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಷ್ಟ್ರೋತ್ಥಾನ ಸಂಕಲ್ಪ ಸಂಸ್ಥೆ ಆಪಾದಿಸಿದೆ. ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ ಸಂಸ್ಥೆಯ ಸಂಚಾಲಕ ಸಂತೋಷ್ ನರಗುಂದ ಮಾತನಾಡಿ, ಸಕಾಲ ಯೋಜನೆ ಆರಂಭವಾದ ವರ್ಷದಲ್ಲಿ ರಾಜ್ಯದಲ್ಲಿ 1.5 ಕೋಟಿಯಷ್ಟು ಅರ್ಜಿಗಳು ಸಲ್ಲಿಕೆಯಾಗಿತ್ತು, 2015ರಲ್ಲಿ 3.5 ಕೋಟಿಯಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಸರಕಾರ ಯೋಜನೆಗೆ ಒತ್ತು ನೀಡದ ಪರಿಣಾಮವಾಗಿ ಸಾರ್ವಜನಿಕರಿಗೆ ಯೋಜನೆಯಿಂದ ಯಾವುದೇ ಲಾಭವಾಗುತ್ತಿಲ್ಲ ಎಂದು ಹೇಳಿದರು. ಕಾಯ್ದೆ ಅನುಸಾರವಾಗಿ ಕೆಎಸ್‌ಜಿಸಿ(ಗ್ಯಾರಂಟಿ ಆಫ್ ಸರ್ವಿಸ್) ಪ್ರಮಾಣ ಪತ್ರವನ್ನು ನೀಡಬೇಕೆಂಬ ನಿಯಮವಿದ್ದು, ಯಾವುದೇ ಕೇಂದ್ರಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಮೂರು ದಿನದ ಕೆಲಸಕ್ಕೆ ಅಧಿಕಾರಿಗಳು ನೂರು ದಿನ ಮಾಡಿದರೂ ಅರ್ಜಿಯನ್ನು ಒಂದು ದಿನದ ಅಂತರದಲ್ಲಿ ದಾಖಲಿಸಿ ಮರುದಿನವೇ ಅದನ್ನು ಅನುಮೋದಿಸುತ್ತಾರೆ. ಕಡತಗಳ ವಿಲೇವಾರಿಯಲ್ಲಿ ವಿಳಂಬ ಅನುಸರಿಸಿ ಕೇವಲ ತೋರಿಕೆಗೆ ಸರಕಾರದ ಕಡತದಲ್ಲಿ ತಕ್ಷಣ ವಿಲೇವಾರಿಯಾಗಿರುವುದನ್ನು ತೋರುತ್ತಾರೆ. ಇದು ಭಾರೀ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಅಧಿಕಾರಿಗಳ ಅಲೆದಾಟ ತಪ್ಪಿಲ್ಲ ಎಂದು ಆಪಾದಿಸಿದರು. ರಾಜ್ಯದಲ್ಲಿ 725 ಸಕಾಲ ಕೇಂದ್ರಗಳಿದ್ದು, ಈ ಪೈಕಿ 135 ಕೇಂದ್ರಗಳಲ್ಲಿ ಮಾತ್ರವೇ ಆನ್‌ಲೈನ್ ಸೇವೆ ಲಭ್ಯವಿದೆ. ಶೇ.80 ರಷ್ಟು ಕೇಂದ್ರಗಳಲ್ಲಿ ಆನ್‌ಲೈನ್ ಸೇವೆಯಿಲ್ಲ. 2015ರಲ್ಲಿ ಸಲ್ಲಿಕೆಯಾಗಿದ್ದ 40 ಸಾವಿರ ದೂರುಗಳಲ್ಲಿ 20 ಸಾವಿರ ದೂರುಗಳಿಗೆ ಪರಿಹಾರವಾಗಿಲ್ಲ. 2014ರಲ್ಲಿಯೇ ಸಹಾಯವಾಣಿ ಕೇಂದ್ರಗಳು ಸ್ಥಗಿತಗೊಂಡಿದ್ದು, 2015ರಲ್ಲಿಯೂ ಅವುಗಳು ಕಾರ್ಯಾರಂಭಿಸಲಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಇದ್ದ ಯೋಜನೆಯೊಂದು ಸಂಪೂರ್ಣ ನಿರ್ಲಕ್ಷವಾಗಿದ್ದಲ್ಲದೆ, ಇದರಲ್ಲಿಯೂ ಭ್ರಷ್ಟಾಚಾರ ಕಂಡು ಬರುತ್ತಿರುವುದು ಸರಿಯಲ್ಲ. ಸರಕಾರ ಕೂಡಲೇ ಸಕಾಲ ಯೋಜನೆಗೆ ಪುನರ್ಜನ್ಮ ನೀಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಚಾಲಕ ವೀರೇಶ್ ಮಾತನಾಡಿ, ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ವೇಳೆಯಲ್ಲಿ ಸೇವೆಯನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಪರಿಹಾರ ನೀಡಲು ಸರಕಾರ 5 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿತ್ತು. ಈ ಅನುದಾನದಲ್ಲಿ ಇದುವರೆಗೂ ಕೇವಲ 70 ಸಾವಿರ ರೂ.ಗಳ ಮಾತ್ರ ಖರ್ಚಾಗಿದೆ. ಸಾರ್ವಜನಿಕರ ದೂರುಗಳನ್ನು ಹೇಳಿದ ಸಮಯದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೂ, ದೂರುದಾರರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಹಿಂದೆ ಸರಿಯುತ್ತಿದ್ದಾರೆ ಎಂದು ಆರೋಪಿಸಿದರು.







