ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಪ್ರಕರಣ; ಅಮಾಯಕರ ಬಿಡುಗಡೆ ಆಗ್ರಹಿಸಿ ಕರವೇ ಧರಣಿ
ಬೆಂಗಳೂರು, ಫೆ. 6: ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಪ್ರಕರಣದ ನೆಪದಲ್ಲಿ ಅಮಾಯಕರನ್ನು ಪೊಲೀಸರು ಬಂಧಿಸುತ್ತಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಇಲ್ಲಿನ ಸೋಲದೇವನಹಳ್ಳಿಯಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಗೊತ್ತಾಗಿದೆ. ಈ ವೇಳೆ ಮಾತನಾಡಿದ ಪ್ರವೀಣ್ ಶೆಟ್ಟಿ, ವಿದ್ಯಾರ್ಥಿನಿಯ ಮೇಲಿನ ಹಲ್ಲೆ ನೆಪದಲ್ಲಿ ಪೊಲೀಸರು ಮುಗ್ಧ ಕನ್ನಡಿಗರನ್ನು ಬಂಧಿಸುತ್ತಿದ್ದು, ನಮ್ಮ ನಾಡಿನ ಕಾನೂನುಗಳನ್ನು ಪಾಲಿಸದ ವಿದ್ಯಾರ್ಥಿಗಳನ್ನು ರಾಜ್ಯದಲ್ಲೇಕೆ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು.
‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು’ ಎಂಬಂತೆ ಯಾರದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎಂಬಂತೆ ಪೊಲೀಸ್ ಸಿಬ್ಬಂದಿಯನ್ನು ರಾಜ್ಯ ಸರಕಾರ ಅಮಾನತು ಮಾಡಿದೆ. ಅಲ್ಲದೆ, ವೀಸಾ ಅವಧಿ ಪೂರ್ಣಗೊಂಡಿರುವ ವಿದೇಶಿಗರನ್ನು ದೇಶದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ಯಾವುದೇ ತಪ್ಪಿಲ್ಲದೆ ಬಂಧಿಸಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪುನಃ ಕರ್ತವ್ಯಕ್ಕೆ ನಿಯೋಜಿಸಬೇಕು. ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವವರನ್ನು ಕೂಡಲೇ ಹೊರಗಟ್ಟಬೇಕು ಎಂದು ಅವರು ಆಗ್ರಹಿಸಿದರು.







