ಉಗುಳುವಿಕೆ ನಿಷೇಧ ಮಸೂದೆಗೆ ಮಹಾರಾಷ್ಟ್ರ ಸರಕಾರದ ಚಿಂತನೆ
ಉಗುಳುವಿಕೆ ನಿಷೇಧ ಮಸೂದೆಗೆ
ಮಹಾರಾಷ್ಟ್ರ ಸರಕಾರದ ಚಿಂತನೆ
ಮುಂಬೈ, ಫೆ.6: ಕ್ಷಯದಂತಹ ಸೋಂಕು ರೋಗಗಳ ತೀವ್ರ ಹೆಚ್ಚಳದಿಂದ ಕಳವಳಗೊಂಡಿರುವ ಮಹಾರಾಷ್ಟ್ರ ಸರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸುವ ಮಸೂದೆಯೊಂದನ್ನು ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದೆ.
ವಿಶ್ವ ಕ್ಯಾನ್ಸರ್ ದಿನದ ಸಂಬಂಧ ಕಳೆದ ವರ್ಷ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಆರೋಗ್ಯ ಸಚಿವ ದೀಪಕ್ ಸಾವಂತ್, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿಯುವುದನ್ನು ನಿಷೇಧಿಸುವ ಪ್ರಸ್ತಾವಿತ ಕಾಯ್ದೆಯೊಂದಿಗೆ, ಉಗುಳುವುದನ್ನು ನಿಷೇಧಿಸುವ ಕಾಯ್ದೆಯ ಕುರಿತಾದ ಚಿಂತನೆಯನ್ನೂ ಮುಂದಿರಿಸಿದ್ದರು.
ಇದಕ್ಕೆ ಭಾರೀ ದಂಡ ವಿಧಿಸುವ ಜೊತೆಗೆ, ತಪ್ಪಿತಸ್ಥರಿಂದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಂತಹ ಸಮಾಜ ಸೇವೆಯನ್ನೂ ಮಾಡಿಸುವ ಯೋಜನೆ ಸರಕಾರಕ್ಕಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತಾವಿತ ಕಾನೂನು ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಹಿಮ್ಮೆಟ್ಟಿಸುವ ಗುರಿ ಹೊಂದಿದೆಯೆಂದು ಅವರು ನಿನ್ನೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
ಕಾನೂನು ಕ್ರಮಗಳನ್ನು ಉತ್ತಮಗೊಳಿಸುವ ಬಗ್ಗೆ ತಾವು ಕಾನೂನು ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ರಾಜ್ಯಾದ್ಯಂತ ಸೋಂಕು ರೋಗಗಳ ತೀವ್ರ ಹೆಚ್ಚಳವನ್ನು ಗಮನಿಸಿ ಉಗುಳುವಿಕೆ-ವಿರೋಧಿ ಕಾಯ್ದೆಯೊಂದನ್ನು ತರಲು ನಾವು ನಿರ್ಧರಿಸಿದ್ದೇವೆ. ಮಾ.9ರಂದು ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಮಂಡಿಸುವ ನಿರೀಕ್ಷೆಯಿದೆಯೆಂದು ಸಾವಂತ್ ವಿವರಿಸಿದ್ದಾರೆ.
ಇದೇ ವೇಳೆ, ಸಚಿವರು ಕಳುಹಿಸಲೇ ಬೇಕಾಗಿರುವ ಇಲಾಖಾ ಟಿಪ್ಪಣಿಯ ಪರಿಶೀಲನೆ ನಡೆಸುವೆನೆಂದು ಕಾನೂನು ಹಾಗೂ ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಎನ್.ಜೆ. ಜಮಾದಾರ್ ತಿಳಿಸಿದ್ದಾರೆ.
ಪ್ರಸ್ತಾವಿತ ಕಾಯ್ದೆಯ ಪ್ರಕಾರ, ಮೊದಲ ಬಾರಿ ಉಗುಳಿದ ತಪ್ಪಿತಸ್ಥರಿಗೆ 1 ಸಾವಿರ ರೂ. ದಂಡ ಹಾಗೂ ಸಾರ್ವಜನಿಕ ಸ್ಥಳ ಅಥವಾ ಸರಕಾರಿ ಕಚೇರಿಗಳಲ್ಲಿ ಒಂದು ದಿನದ ಸಮುದಾಯ ಸೇವೆಯ ಶಿಕ್ಷೆ ವಿಧಿಸಲಾಗುವುದು.
ಎರಡನೆ ಬಾರಿ ಸಿಕ್ಕಿ ಬಿದ್ದವರಿಗೆ 3 ಸಾವಿರ ರೂ. ದಂಡ ಹಾಗೂ 3 ದಿನಗಳ ಸಮುದಾಯ ಸೇವೆಯ ಶಿಕ್ಷೆ ವಿಧಿಸಲಾಗುವುದು. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಿದವರು 5 ಸಾವಿರ ರೂ. ದಂಡ ತೆರಬೇಕು ಹಾಗೂ 5 ದಿನ ಸಮುದಾಯ ಸೇವೆ ಮಾಡಬೇಕಾಗುತ್ತದೆ.
ಕೇವಲ ಜುಜುಬಿ ದಂಡ ವಿಧಿಸಿದರೆ ಸಾಕಾಗದು. ಆದುದರಿಂದ ಸರಕಾರವು ಕಡ್ಡಾಯ ಸಮುದಾಯ ಸೇವೆಯನ್ನೂ ವಿಧಿಸಲೂ ನಿರ್ಧರಿಸಿದೆ. ತಪ್ಪಿತಸ್ಥರ ಕೈಗೆ ಕಸಬರಿಕೆ ನೀಡಿ ಸಾರ್ವಜನಿಕ ಸ್ಥಳ ಅಥವಾ ಸರಕಾರಿ ಕಚೇರಿಗಳನ್ನು ಗುಡಿಸುವ ಸಮುದಾಯ ಸೇವೆ ಮಾಡುವಂತೆ ಸೂಚಿಸಲಾಗುವುದು. ತಪ್ಪಿತಸ್ಥರ ಅಹಂಕಾರಕ್ಕೆ ಧಕ್ಕೆ ತಂದು ಅವರು ಆ ಕೃತ್ಯವನ್ನು ಮತ್ತೆ ಮಾಡದಂತೆ ನಿರುತ್ತೇಜಿಸುವುದು ಇದರ ಗುರಿಯಾಗಿದೆಯೆಂದು ಸಾವಂತ್ ಹೇಳಿದ್ದಾರೆ.





