ಅಲಯನ್ಸ್ ವಿವಿ ಉಪಕುಲಪತಿ ವಿರುದ್ಧ ಅತ್ಯಾಚಾರ ಆರೋಪ; ಬಂಧನ

ಬೆಂಗಳೂರು, ಫೆ.6: ನಗರದ ಅಲಯನ್ಸ್ ವಿಶ್ವವಿದ್ಯಾನಿಲಯದ ಉಪ ಕುಲಪತಿಯೇ ವಿಶ್ವ ವಿದ್ಯಾನಿಲಯದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮಡಿವಾಳ ಠಾಣಾ ಪೊಲೀಸರು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಲಯನ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿ ಮಧುಕರ್ ಜಿ.ಅಂಗೂರ್(52) ಎಂದು ಗುರುತಿಸಲಾಗಿದೆ.
ಆರೋಪಿಯು 32 ವರ್ಷದ ಯುವತಿಯನ್ನು ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ವೆಸಗುತ್ತಿದ್ದ ಎಂದು ಮಡಿವಾಳ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದಾರೆ.
ನಿರಂತರ ಅತ್ಯಾಚಾರದ ಹ್ನಿನ್ನೆಲೆಯಲ್ಲಿ ಯುವತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ. ಆ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಲೈಯನ್ಸ್ ವಿವಿ ಉಪ ಕುಲಪತಿ ಆರೋಪಿ ಮಧುಕರ್ ಅಂಗೂರ್‌ಗೆ ಸಂತ್ರಸ್ತ ಯುವತಿಯ ಹತ್ತಿರದ ಸಂಬಂಧಿಯಾಗಿದ್ದು, ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆಂದು ಹೇಳಲಾಗಿದೆ. ಇದಕ್ಕೆ ಆಸ್ತಿ ವಿವಾದವೂ ತಳುಕು ಹಾಕಿಕೊಂಡಿದ್ದು, ಈ ಸಂಬಂಧ ಇಲ್ಲಿನ ಮಡಿವಾಳ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.







