ನಗರದ ವಿವಿಧೆಡೆ ಚಿನ್ನದ ಸರ ಅಪಹರಣ
ಬೆಂಗಳೂರು, ಫೆ.6: ನಗರದ ವಿವಿಧೆಡೆ ಸರಗಳ್ಳತನ ನಡೆದಿದ್ದು, ವಾಯುವಿಹಾರ ಮುಗಿಸಿಕೊಂಡು ಮನೆಗೆ ತೆರೆಳುತ್ತಿದ್ದ ಮಹಿಳೆಯ 20 ಗ್ರಾಂ ಚಿನ್ನದ ಸರ ಅಪಹರಿಸಿರುವ ಘಟನೆ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ 3ನೆ ಹಂತದ ನಿವಾಸಿ ವಸಂತಲಕ್ಷ್ಮೀ(60) ಸರ ಕಳೆದುಕೊಂಡವರು. ಫೆ.5ರಂದು ರಾತ್ರಿ ವಾಯುವಿಹಾರ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಬೈಕ್‌ನಿಂದ ಬಂದ ದುಷ್ಕರ್ಮಿಗಳು ಕೊರಳಲ್ಲಿದ್ದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸ ಗುಡಿಸುವಾಗ ಸರ ಅಪಹರಣ: ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಸರ ಅಪಹರಿಸಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸರಸ್ವತಿ ನಗರ, 6ನೆ ಕ್ರಾಸ್ ನಿವಾಸಿ ಶಾಂತಮ್ಮ ಸರ ಕಳೆದುಕೊಂಡವರು. ಶಾಂತಮ್ಮ ಮನೆ ಕಳೆದುಕೊಂಡ ಮಹಿಳೆಯಾಗಿದ್ದು, ಇವರು ಫೆ.5ರಂದು ಮನೆ ಮುಂದೆ ಕಸ ಗುಡಿಸುವಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಲ್ಲರೆ ಅಂಗಡಿಗೆ ಬಂದ ಇಬ್ಬರು ಆರೋಪಿಗಳು ವ್ಯಾಪಾರಿ ಮಹಿಳೆಯ ಸರ ಅಪಹರಿಸಿರುವ ಘಟನೆ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾಂತಿ ಲೇಔಟ್ ನಿವಾಸಿ ಅಲಮೇಲಮ್ಮ ಸರ ಕಳೆದುಕೊಂಡವರು. ಅಲಮೇಲಮ್ಮ ಚಿಲ್ಲರೆ ಅಂಗಡಿ ನಡೆಸುತ್ತಿದ್ದು, ಸಾಮಗ್ರಿ ಖರೀದಿ ನೆಪದಲ್ಲಿ ಬಂದ ಇಬ್ಬರು ಆರೋಪಿಗಳು ಅವರ ಕೊರಳಲ್ಲಿದ್ದ 56 ಗ್ರಾಂ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







