ಮುಖ್ಯಮಂತ್ರಿಯಾಗಿ ಮೋದಿ ಮಾಡಿದ್ದ ಎಲ್ಲ ಸರಕಾರಿ ಭೂಮಿ ಹಂಚಿಕೆಗಳ ಸಿಟ್ ತನಿಖೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ,ಫೆ.6: ಗುಜರಾತ್ ಭೂ ಹಗರಣ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪೇಚಿಗೆ ಸಿಲುಕಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು, ಈ ಹಗರಣ ಕುರಿತು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕೆಂಬ ತನ್ನ ಆಗ್ರಹವನ್ನು ಶನಿವಾರ ಇನ್ನಷ್ಟು ತೀವ್ರಗೊಳಿಸಿದೆ. ಮೋದಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮತ್ತು ಆನಂದಿ ಬೆನ್ ಪಟೇಲ್ ಅವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಮಾಡಲಾಗಿದ್ದ ಎಲ್ಲ ಸರಕಾರಿ ಭೂ ಹಂಚಿಕೆಗಳ ಕುರಿತೂ ಅದು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ವಕ್ತಾರ ಆನಂದ್ ಶರ್ಮಾ ಅವರು ಈ ಒತ್ತಾಯವನ್ನು ಮಾಡಿದರು.
ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಗತ್ಯ ವಿಧಿವಿಧಾನಗಳನ್ನು ಅನುಸರಿಸದೆ ಕಾರ್ಪೊರೇಟ್ ಕುಳಗಳಿಗೆ ಜುಜುಬಿ ಬೆಲೆಗಳಲ್ಲಿ ಭೂ ಮಾರಾಟ ಮಾಡುವ ಮೂಲಕ ಸರಕಾರಿ ಭೂಮಿ ಮತ್ತು ಅರಣ್ಯಭೂಮಿಯನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಅವರು ಆಪಾದಿಸಿದರು.
ಈ ವಿಷಯದಲ್ಲಿ ಪ್ರಾಮಾಣಿಕತೆಯನ್ನು ಪ್ರದರ್ಶಿಸುವಂತೆ ಮೋದಿಯವರಿಗೆ ಸೂಚಿಸಿದ ಶರ್ಮಾ,ತನ್ನ ಪುತ್ರಿ ಅನಾರ್ ಪಟೇಲ್ ಜೊತೆ ನಿಕಟ ವ್ಯವಹಾರ ಸಂಪರ್ಕಗಳನ್ನು ಹೊಂದಿರುವ ಕಂಪೆನಿಗೆ ಗಿರ್ ಸಿಂಹಧಾಮದ ಬಳಿ ಸರಕಾರಿ ಭೂಮಿಯನ್ನು ಮಂಜೂರು ಮಾಡುವಾಗ ಆಗಿನ ಕಂದಾಯ ಸಚಿವೆ ಆನಂದಿ ಬೆನ್ ಪಟೇಲ್ ಅವರ ‘‘ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷ’’ದ ಅರಿವು ಮೋದಿಯವರಿಗೆ ಇತ್ತೇ ಎನ್ನುವುದನ್ನು ತಿಳಿಯಲು ಬಯಸಿದರು.







