ಸೋಮಸುಂದರ ಪಾಳ್ಯ ಕೆರೆ ಈಗ ಸ್ವಚ್ಛ
ಬೆಂಗಳೂರು, ಫೆ.6: ಮಹಾನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯದ ಸೋಮಸುಂದರಪಾಳ್ಯ ಕೆರೆಯ ಕಲುಷಿತ ನೀರಿನಲ್ಲಿ ಇ.ಎಮ್.ಕಲ್ಚರ್ ಅಳವಡಿಸುವ ಮೂಲಕ ನೀರನ್ನು ಸ್ವಚ್ಛಗೊಳಿಸಲಾಗಿದೆ ಎಂದು ವಲಯ ಜಂಟಿಆಯುಕ್ತ ಮುನಿರಾಜು ತಿಳಿಸಿದ್ದಾರೆ.
ಸೋಮಸುಂದರ ಪಾಳ್ಯದ ಕೆರೆಯಲ್ಲಿ ಒಳಚರಂಡಿ ನೀರು ಹರಿದು ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಂಡು ದುರ್ವಾಸನೆ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಾಗರಿಕರು ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಲಯ ಜಂಟಿ ಆಯುಕ್ತರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಪರಿಸರ ತಜ್ಞ ಕುಲಕರ್ಣಿ ಒಂದು ತಿಂಗಳ ಹಿಂದೆಯೇ ಕೆರೆಯಲ್ಲಿ 600 ಲೀಟರ್‌ಗಳಷ್ಟು ಪರಿಣಾಮಕಾರಿ ಸೂಕ್ಷ್ಮಜೀವಿಗಳ ಪರಿಹಾರಗಳನ್ನು ಸಿಂಪಡಿಸಿದ್ದರು. ಇದರಿಂದಾಗಿ ಈಗ ಕೆರೆಯ ನೀರು ಸ್ವಚ್ಛಗೊಂಡಿದ್ದು ದುರ್ವಾಸನೆಯಿಂದ ಮುಕ್ತಿ ಹೊಂದಿದೆ. ಇದಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.





