ತ.ನಾ: ಮದುವೆಯಲ್ಲೂ ಅಮ್ಮಾ ಬ್ರಾಂಡ್ ಪ್ರವೇಶ

ಚೆನ್ನೈ,ಫೆ.6: ಅಮ್ಮಾ ಕ್ಯಾಂಟೀನ್, ಅಮ್ಮಾ ಸಿಮೆಂಟ್‌ನಿಂದ ಹಿಡಿದು, ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಅಮ್ಮಾ ಪರಿಹಾರ ಸಾಮಾಗ್ರಿ ಪೂರೈಕೆ ತನಕ ಮುಖ್ಯಮಂತ್ರಿ ಜಯಲಲಿತಾ ಅವರ ‘ಅಮ್ಮಾ ಬ್ರಾಂಡ್’ ತಮಿಳುನಾಡಿನಲ್ಲಿ ಸರ್ವವ್ಯಾಪಿಯಾಗಲು ಎಡಿಎಂಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.
ಇದೀಗ ವಿವಾಹ ಕಾರ್ಯಕ್ರಮಗಳಲ್ಲಿಯೂ ಅಮ್ಮಾ ಬ್ರಾಂಡ್‌ನ ಪ್ರವೇಶವಾಗಿದೆ. ಹೌದುಮುಖ್ಯಮಂತ್ರಿ ಜಯಲಲಿತಾ ಅವರ 68ನೆ ಹುಟ್ಟುಹಬ್ಬದ ದಿನವಾದ ಫೆಬ್ರವರಿ 24ರಂದು ಕೊಯಮತ್ತೂರಿನ ಉದುಮಲೈಪೆಟ್ಟೈನಲ್ಲಿ ಎಐಡಿಎಂಕೆ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧೂವರರ ಹಣೆಗಳ ಮೇಲೂ ಜಯಲಲಿತಾ ಭಾವಚಿತ್ರವಿರುವ ಸ್ಟಿಕ್ಕರ್‌ಗಳು ರಾರಾಜಿಸಲಿವೆ. ಈ ಕಾರ್ಯಕ್ರಮದಲ್ಲಿ ಜಯಲಲಿತಾ ಪಾಲ್ಗೊಳ್ಳುವುದಿಲ್ಲವಾದರೂ, ಅವರ ಅನುಪಸ್ಥಿತಿಯ ಕೊರತೆ ಕಂಡುಬರದಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಎಐಡಿಎಂಕೆ ಕಾರ್ಯಕರ್ತರು ಮಾಡುತ್ತಿದ್ದಾರೆ.
ವಿವಾಹದ ವಾದ್ಯವೃಂದದ ಬ್ಯಾಂಡ್‌ಗಳಲ್ಲಿಯೂ ಆಕೆಯ ಭಾವಚಿತ್ರಗಳು ಮಿಂಚಲಿವೆ. ಅಲ್ಲದೆ ಇಡೀ ಸಭಾಂಗಣದಲ್ಲಿ ಜಯಲಲಿತಾ ಅವರ ಬೃಹತ್ ಕಟೌಟ್‌ಗಳು ವಿಜೃಂಭಿಸಲಿವೆ.





