ನಾನಾ ಪಾಟೇಕರ್‌ರ ಎನ್‌ಜಿಒದಿಂದ ರೈತ ವಿಧವೆಯರಿಗೆ ರೂ.12.75ಲಕ್ಷ ಕೊಡುಗೆ
ನಾಸಿಕ್, ಫೆ.6: ನಟ ನಾನಾ ಪಾಟೇಕರರ ಸರಾಕರೇತರ ಸಂಘಟನೆ ‘ನಾಮ್’ ಪ್ರತಿಷ್ಠಾನವು ಕಳೆದ ವರ್ಷ ಬರಗಾಲದ ಬವಣೆಯಿಂದ ಆತ್ಮಹತ್ಯೆ ಮಾಡಕೊಂಡಿದ್ದ ಜಿಲ್ಲೆಯ ರೈತರ 85 ಕುಟುಂಬಗಳಿಗೆ 12.75 ಲಕ್ಷ ರೂ. ಕೊಡುಗೆ ನೀಡಿದೆ.
ತಲಾ ರೂ.15 ಸಾವಿರಗಳ ಚೆಕ್‌ಗಳನ್ನು ಬೆಳೆ ವೈಫಲ್ಯ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿದ್ದ 85 ಮಂದಿ ರೈತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಶುಕ್ರವಾರ ನಾಸಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತನ್ನ ಬವಣೆಯನ್ನು ವಿವರಿಸಿದ ಮಾಲೆಗಾಂವ್‌ನ ಯುವ ವಿಧವೆ ಸುಜಾತಾ ಬಚ್ಚಾವ್ ಎಂಬವರು, ಭಾರೀ ಸಾಲದ ಹೊರೆಯನ್ನು ತಾಳಲಾರದೆ ತನ್ನ ಗಂಡ ಪ್ರಾಣ ಕಳೆದುಕೊಂಡರು. ಯಾವುದೇ ಸರಿಯಾದ ಆದಾಯ ಮಾರ್ಗವಿಲ್ಲದ ತಾನೀಗ ಅತ್ತೆ-ಮಾವ ಹಾಗೂ ಮಗಳ ಜವಾಬ್ದಾರಿ ಹೊರ ಬೇಕಾಗಿ ಬಂದಿದೆ. ಈಗ ಪಾಟೇಕರ್ ನೆರವನ್ನು ನೀಡಿದ್ದಾರೆ ಎಂದರು.
ಅಂತಹ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ದೇಣಿಗೆ ನೀಡುವ ಮೂಲಕ ಹಾಗೂ ವಿವಿಧ ಮಾರ್ಗಗಳಿಂದ ನೆರವಾಗುವಂತೆ ಪಾಟೇಕರ್ ಜನರಿಗೆ ಮನವಿ ಮಾಡಿದರು.
ನಾಮ್ ಪ್ರತಿಷ್ಠಾನವು ವೈದ್ಯಕೀಯ ಕಾರ್ಡ್ ಸೌಲಭ್ಯವನ್ನು ಆರಂಭಿಸಿದ್ದು, ನಾಮ್ ಮೆಡಿಕಲ್ ಕಾರ್ಡ್ ಹೊಂದಿರುವವರಿಗೆ ಧರ್ಮಾರ್ಥ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
ಮರಾಠಿ ನಟ ಮಕರಂದ್ ಅನಾಸ್‌ಪುರೆ ಈ ಸಂದರ್ಭ ಉಪಸ್ಥಿತರಿದ್ದರು. ಅವರೂ, ನಾಮ್ ಪ್ರತಿಷ್ಠಾನಕ್ಕೆ ಸಂಬಂಧಿಸಿದವರಾಗಿದ್ದಾರೆ.





