ದೌರ್ಜನ್ಯಕ್ಕೊಳಗಾದ ಬಂಧಿತರ ಚಿತ್ರ ಬಿಡುಗಡೆ ಮಾಡಿದ ಪೆಂಟಗಾನ್
ವಾಶಿಂಗ್ಟನ್, ಫೆ. 6: ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಬಂಧನದಲ್ಲಿರುವವರ ಸುಮಾರು 200 ಚಿತ್ರಗಳನ್ನು ಅಮೆರಿಕದ ರಕ್ಷಣಾ ಇಲಾಖೆಯ ಕಚೇರಿ ಪೆಂಟಗಾನ್ ಶುಕ್ರವಾರ ಬಿಡುಗಡೆ ಮಾಡಿದೆ.
ಇವುಗಳ ಪೈಕಿ ಹೆಚ್ಚಿನ ಚಿತ್ರಗಳನ್ನು 2004 ಮತ್ತು 2006ರ ನಡುವೆ ತೆಗೆಯಲಾಗಿದೆ ಹಾಗೂ ಅಮೆರಿಕದ ಸೈನಿಕರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿರುವವರ 56 ಚಿತ್ರಗಳೂ ಇವೆ.
ಹೆಚ್ಚಿನ ಕಪ್ಪು ಮತ್ತು ಅಸ್ಪಷ್ಟ ಚಿತ್ರಗಳು ಮುಖ್ಯವಾಗಿ ಬಂಧಿತರ ಕೈಗಳು ಮತ್ತು ಕಾಲುಗಳದ್ದಾಗಿವೆ. ಕೈಗಳು ಮತ್ತು ಕಾಲುಗಳ ಗಾಯಗಳನ್ನು ಚಿತ್ರಗಳು ತೋರಿಸುತ್ತವೆ.
ಆದಾಗ್ಯೂ, ಒಂದು ದಶಕಕ್ಕೂ ಹಿಂದೆ ಬಿಡುಗಡೆಯಾಗಿದ್ದ ಇರಾಕ್‌ನ ಅಬು ಘಾರಿಬ್ ಜೈಲಿನ ಚಿತ್ರಗಳು ಮಾಡಿದ್ದ ಸದ್ದನ್ನು ಈ ಚಿತ್ರಗಳು ಮಾಡಿಲ್ಲ. ನಗ್ನ ಕೈದಿಗಳ ಮಾನವ ಪಿರಾಮಿಡ್ ರಚಿಸಿರುವುದು ಹಾಗೂ ನಗ್ನ ಕೈದಿಯೊಬ್ಬನನ್ನು ನಾಯಿಯ ಕಾಲರ್ ಮತ್ತು ಸಂಕೋಲೆ ತೊಡಿಸಿ ಸೈನಿಕನೊಬ್ಬ ಎಳೆದುಕೊಂಡು ಹೋಗುತ್ತಿರುವಂಥ ಚಿತ್ರಗಳು ಅಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿ 65 ಸೈನಿಕರ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬಿಡುಗಡೆಗೊಳಿಸಲಾದ 198 ಚಿತ್ರಗಳ ಪೈಕಿ 14 ಚಿತ್ರಗಳು ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿವೆ ಹಾಗೂ ದೌರ್ಜನ್ಯ ನಡೆದಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಪೆಂಟಗಾನ್ ಹೇಳಿದೆ. ಆದಾಗ್ಯೂ, 42 ದೌರ್ಜನ್ಯ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿಲ್ಲ.





