‘ಭ್ರೂಣ ಲಿಂಗ ಪತ್ತೆ ಡ್ಡಾಯ’ ಪ್ರಸ್ತಾವ ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು, ಫೆ. 6: ಭ್ರೂಣಲಿಂಗ ಪತ್ತೆಯನ್ನು ಕಡ್ಡಾಯಗೊಳಿಸಲು ಹೊರಟಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮೇನಕಾಗಾಂಧಿಯ ಪ್ರಸ್ತಾವವನ್ನು ಖಂಡಿಸಿ ಸಮಾನ ಮನಸ್ಕರ ಸಂಘಟನೆ ಕಾರ್ಯಕರ್ತರು ನಗರದ ಟೌನ್ ಹಾಲ್ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, 1994ರಲ್ಲಾದ ಪಿ.ಸಿ.ಪಿ.ಎನ್‌ಡಿಟಿ ಕಾಯ್ದೆಗೆ 2003ರಲ್ಲಿ ತಿದ್ದುಪಡಿಯನ್ನು ತಂದು ಗರ್ಭಿಣಿ ಮಹಿಳೆಯರನ್ನು ಅಪರಾಧ ವ್ಯಾಪ್ತಿಯಿಂದ ದೂರವಿಡಲಾಗಿತ್ತು. ಆದರೆ ಹೊಸ ಪ್ರಸ್ತಾವನೆಯಲ್ಲಿ ಗರ್ಭದಲ್ಲಿ ಶಿಶುವನ್ನು ಕಾಪಾಡುವುದರ ಬದಲಿಗೆ, ಸಕ್ರಮವಾಗಿ ಲಿಂಗ ಪತ್ತೆಯಾದ ಕೂಡಲೇ ಅಕ್ರಮವಾಗಿ ಗರ್ಭಪಾತಗಳು ನಡೆಯಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತವಿರುವ ಕಾಯ್ದೆಯನ್ನೇ ಮುಂದುವರಿಸಬೇಕು. ಜೊತೆಗೆ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗುವ ವೈದ್ಯರ ಮೇಲೆ ಕಾನೂನು ಕ್ರಮವನ್ನು ಜರಗಿಸಬೇಕು. ಈಗಿರುವ ಶಿಕ್ಷೆ ಮತ್ತು ದಂಡ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಇಂತಹ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕ ನ್ಯಾಯಾಲಯವನ್ನು ಪ್ರಾರಂಭಿಸಬೇಕೆಂದು ಅವರು ಒತ್ತಾಯಿಸಿದರು.ನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮೀ ಮಾತನಾಡಿ, ಇದುವರೆಗೂ ಕದ್ದು ಮುಚ್ಚಿ ನಡೆಯುತ್ತಿದ್ದ ಭ್ರೂಣ ಹತ್ಯೆ ದಂಧೆ ಇನ್ನು ಮುಂದೆ ರಾಜಾರೋಷವಾಗಿ ನಡೆಸಲು ಸರಕಾರ ಅವಕಾಶ ಮಾಡಿಕೊಡಲಾಗಿದೆ. ಇದು ಸಮಾಜ ವಿರೋಧಿ ಕೃತ್ಯವಾಗಿದೆ ಎಂದು ತಿಳಿಸಿದರು.
ಕಾನೂನು ವಿರುದ್ಧವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದವರು ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಾ, ಕಾರ್ಪೊರೇಟ್ ವಲಯದಲ್ಲಿ ವೈದ್ಯ ವೃತ್ತಿಯಲ್ಲಿರುವಂತಹವರ ಅನುಕೂಲಕ್ಕಾಗಿ ಈ ಅವೈಜ್ಞಾನಿಕ ಕಾನೂನನ್ನು ಮಾಡಲು ಹೊರಟಿದ್ದಾರೆ. ಆದ್ದರಿಂದ ಕೂಡಲೇ ಈ ಪ್ರಸ್ತಾವನೆಯನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಕೆಲವು ಸ್ಥಾಪಿತ ಹಿತಾಸಕ್ತಿಗಳಿಗೆ ಬಲಿಯಾಗಿ ಹೆಣ್ಣು ಕೂಸುಗಳನ್ನು ಬಲಿಕೊಡಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಫ್‌ಐಡಬ್ಲೂನ ಜ್ಯೋತಿ, ಎಐಎಮ್‌ಎಸ್‌ಸ್‌ನ ಜಾಹಿದಾ ಶೆರೀನ್, ಸಮತಾದ ಪ್ರಭಾ ಎನ್, ಮಹಿಳಾ ಮುನ್ನಡೆಯ ಗೌರಿ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ಸೇವಾ ಟ್ರಸ್ಟ್‌ನ ಡಾ. ಅನಿಲ್, ವಿಮೋಚನಾದ ಡೋನಾ ಫೆರ್ನಾಂಡಿಸ್, ವುಮೆನ್ಸ್ ವಾಯ್ಸ್‌ನ ಶಹತಾಜ್, ಮುನ್ನಡೆಯ ಯಶೋದಾ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಇನ್ನಿತರರು ಭಾಗವಹಿಸಿದ್ದರು.







