ಜಿಪಂ-ತಾಪಂ ಚುನಾವಣೆ
ಉಡುಪಿ: ಜಿಪಂಗೆ 24, ತಾಪಂಗೆ 57 ನಾಮಪತ್ರ
ಉಡುಪಿ, ಫೆ.6: ಉಡುಪಿ ಜಿಪಂ ಹಾಗೂ ತಾಪಂ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಯ ಆರನೆ ದಿನವಾದ ಶನಿವಾರ ಜಿಪಂಗೆ 24 ಹಾಗೂ ತಾಪಂಗೆ 57 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ಜಿಪಂಗೆ ಉಡುಪಿ ತಾಲೂಕಿನಲ್ಲಿ 11, ಕುಂದಾಪುರದಲ್ಲಿ 6 ಹಾಗೂ ಕಾರ್ಕಳ ತಾಲೂಕಿನಲ್ಲಿ 7 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದೇ ರೀತಿ ತಾಪಂಗೆ ಉಡುಪಿ ತಾಲೂಕಿನಲ್ಲಿ 17, ಕುಂದಾಪುರದಲ್ಲಿ 23 ಹಾಗೂ ಕಾರ್ಕಳ ತಾಲೂಕಿನಲ್ಲಿ 17 ನಾಮಪತ್ರಗಳು ಸಲ್ಲಿಕೆಯಾಗಿವೆ.
ಆಶ್ಚರ್ಯದ ವಿಷಯವೆಂದರೆ ಜಿಪಂಗೆ ಉಡುಪಿ ತಾಲೂಕಿನಲ್ಲಿ ಒಂದು, ಕುಂದಾಪುರ ತಾಲೂಕಿನಲ್ಲಿ ಒಂದು ಕ್ಷೇತ್ರಕ್ಕೆ ಹಾಗೂ ತಾಪಂಗೆ ಉಡುಪಿ ತಾಲೂಕಿನ ಏಳು ಹಾಗೂ ಕುಂದಾಪುರ ತಾಲೂಕಿನ ಒಂದು ಕ್ಷೇತ್ರಗಳಿಗೆ ಇನ್ನೂ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಫೆ.8ರ ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಂದು ಈ 10 ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಸಬೇಕಾಗಿದೆ.
ಶನಿವಾರ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯಲ್ಲಿ ಒಂದೇ ನಾಮಪತ್ರ (ಕುಂದಾಪುರ) ಸಲ್ಲಿಕೆಯಾಗಿದೆ. ಬಿಜೆಪಿ 11 (ಉ-4, ಕಾ-7), ಜನತಾ ದಳ 1(ಕು), ಬಿಎಸ್ಪಿ 1(ಉ), ಸಿಪಿಎಂ 1(ಕು) ಹಾಗೂ ಪಕ್ಷೇತರರು 9 (ಉ-6, ಕು-3) ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ತಾಪಂಗೆ ಕಾಂಗ್ರೆಸ್ ಅಭ್ಯರ್ಥಿಗಳು 12 (ಉ-6,ಕು-6), ಬಿಜೆಪಿ 33( ಉ-8, ಕು-8, ಕಾ-17), ಜನತಾ ದಳ 2 (ಉ-1,ಕು-1), ಸಿಪಿಎಂ4(ಕು) ಹಾಗೂ ಪಕ್ಷೇತರರು 6(ಉ-2,ಕು-4) ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ರಂಗೇರುತ್ತಿರುವ ಚುನಾವಣಾ ಕಣ: ಹಳೆಮುಖಗಳು ಮತ್ತೆ ಅಖಾಡದಲ್ಲಿ
ಪುತ್ತೂರು, ಫೆ.6: ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಸ್‌ಡಿಪಿಐ, ಜೆಡಿಎಸ್ ಹಾಗೂ ಪಕ್ಷೇತರರೂ ನಾಮಪತ್ರ ಸಲ್ಲಿಸುತ್ತಿದ್ದು, ಪ್ರಕ್ರಿಯೆ ಮುಂದುವರಿದಿದೆ. ಹಲವಾರು ಹಳೆ ಅನುಭವಿಗಳು ಇದೀಗ ಮತ್ತೆ ಸ್ಪರ್ಧಾ ಅಖಾಡದಲ್ಲಿ ಇದ್ದು, ಈ ಹಿನ್ನೆಲೆ ಯಲ್ಲಿ ಪುತ್ತೂರು ತಾಲೂಕಿನ ಚುನಾವಣಾ ಕಣ ರಂಗೇರುತ್ತಿದೆ. ಜಿಪಂ ಕ್ಷೇತ್ರಕ್ಕೆ ಬೆಳಂದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಾಪಂ ಮಾಜಿ ಉಪಾಧ್ಯಕ್ಷೆ ಪ್ರಮೀಳಾ ಜನಾರ್ದನ, ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಡಬ ಕ್ಷೇತ್ರಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗೀಸ್, ನೆಲ್ಯಾಡಿ ಕ್ಷೇತ್ರಕ್ಕೆ ಮಾಜಿ ತಾಪಂ ವಿಪಕ್ಷ ನಾಯಕ ಹಾಗೂ ಪ್ರಸ್ತುತ ಕೆಡಿಪಿ ನಾಮನಿರ್ದೇಶಿತ ಸದಸ್ಯ ಸರ್ವೋತ್ತಮ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆಯಾಗಿದ್ದ ಬಿಜೆಪಿಯ ಮೀನಾಕ್ಷಿ ಮಂಜುನಾಥ್ ಬೆಟ್ಟಂಪಾಡಿ ತಾಪಂ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದಾರೆ. ತಾಪಂ ಕ್ಷೇತ್ರಕ್ಕೆ ಆರ್ಯಾಪು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಮಾಜಿ ಜಿಪಂ ಸದಸ್ಯ, ಎಪಿಎಂಸಿ ನಿರ್ದೇಶಕ ಹಾಗೂ ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಾಜ ರಾಧಾಕೃಷ್ಣ ಆಳ್ವ, ಅರಿ ಯಡ್ಕ ಕ್ಷೇತ್ರಕ್ಕೆ ತಾಪಂ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೆಯ್ಯೂರು ಕ್ಷೇತ್ರಕ್ಕೆ ಮಾಜಿ ತಾಪಂ ಸದಸ್ಯೆ ಭವಾನಿ ಚಿದಾನಂದ, ಕಾಂಗ್ರೆಸ್‌ನಿಂದ ಗ್ರಾಪಂ ಮಾಜಿ ಸದಸ್ಯ, ಆರ್ಯಾಪು ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಅರಿ ಯಡ್ಕ ಕ್ಷೇತ್ರಕ್ಕೆ ಮಾಜಿ ತಾಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಬಜತ್ತೂರು ಕ್ಷೇತ್ರಕ್ಕೆ ಮಾಜಿ ಗ್ರಾಪಂ ಸದಸ್ಯ ಉಮ್ಮರ್ ಕೆಮ್ಮಾರ, ಬೆಳಂದೂರು ಕ್ಷೇತ್ರಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕಡೆಂಜೆ ನಾಮಪತ್ರ ಸಲ್ಲಿಸಿದ್ದಾರೆ.
ಇದರೊಂದಿಗೆ ಹಲವಾರು ಹೊಸ ಮುಖಗಳು ಸ್ಪರ್ಧಾಕಾಂಕ್ಷಿಗಳಾಗಿ ಗುರುತಿಸಿ ಕೊಂಡಿದ್ದಾರೆ. ಪಾಣಾಜೆ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪವಿತ್ರಾ ಬಾಬು ಮರಿಕೆ, ನೆಟ್ಟಣಿಗೆ ಮುಡ್ನೂರು ಕ್ಷೇತ್ರದಿಂದ ವೀಣಾ ಆರ್. ರೈ ಸ್ಪರ್ಧಾಕಣದಲ್ಲಿದ್ದರೆ, ತಾಪಂ ಕ್ಷೇತ್ರದಲ್ಲಿ ಒಳಮೊಗರು ಕ್ಷೇತ್ರಕ್ಕೆ ಬಿಜೆಪಿಯಿಂದ ಹರೀಶ್ ನಾಯ್ಕ ಬಿಜತ್ರೆ, ಕೊಳ್ತಿಗೆ ಕ್ಷೇತ್ರಕ್ಕೆ ಸೀತಾರಾಮ ಗೌಡ ಮಾಡ್ನೂರು, ಕಬಕ ಕ್ಷೇತ್ರಕ್ಕೆ ದಿವ್ಯಾ ಪುರುಷೋತ್ತಮ ಗೌಡ, ಬೆಟ್ಟಂಪಾಡಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅನಿತಾ ಕೂವೆಂಜ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಜಿಪಂ ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಡಬ ಕ್ಷೇತ್ರದಲ್ಲಿ ಗಣಪಯ್ಯ ಗೌಡ ಮತ್ತು ನೆಲ್ಯಾಡಿ ಕ್ಷೇತ್ರಕ್ಕೆ ಧನಂಜಯ ಗೌಡ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ನೆಲ್ಯಾಡಿ ಕ್ಷೇತ್ರದಲ್ಲಿ ಹಾಲಿ ಜಿಪಂ ಸದಸ್ಯ ಬಾಲಕೃಷ್ಣ ಬಾಣಜಾಲ್‌ರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದ್ದು, ಇದನ್ನು ವಿರೋಧಿಸಿ ಕುಟ್ರುಪ್ಪಾಡಿ ಮಂಡಲ ಬಿಜೆಪಿ ಉಪಾಧ್ಯಕ್ಷ ಧನಂಜಯ ಗೌಡ ಬಲ್ಯ ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ.
ಚೇಳಾರು: ಮತಗಟ್ಟೆ ಬದಲಾವಣೆ
ಮಂಗಳೂರು, ಫೆ.6: ತಾಲೂಕಿನ ಚೇಳಾರು ಗ್ರಾಮದ ಮತಗಟ್ಟೆ ಸಂಖ್ಯೆ 122 ಮತ್ತು 123ಗಳು ಹಿಂದೆ ಚೇಳಾರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದ್ದು, ಇವುಗಳನ್ನು ಚೇಳಾರು ಸರಕಾರಿ ಪಪೂ ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಕಾಂಗ್ರೆಸ್ ವಿರುದ್ಧ ಕ್ರೈಸ್ತರ ಆಕ್ರೋಶ
ಕುಂದಾಪುರ, ಫೆ.6: ಬೈಂದೂರು ಕ್ಷೇತ್ರದಲ್ಲಿ ಸುಮಾರು 15,000 ಕ್ರಿಶ್ಚಿಯನ್ ಮತದಾರರಿದ್ದು, ಆದರೆ ಈಗಾಗಲೇ ಪ್ರಕಟವಾಗಿರುವ ಜಿಪಂ ಹಾಗೂ ತಾಪಂ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ನರಿಗೆ ಪ್ರಾತಿನಿಧ್ಯ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷ ಫೈವನ್ ಡಿಸೋಜ ಆರೋಪಿಸಿದ್ದಾರೆ.
ಈ ಹಿಂದೆ ಈ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದಿಂದ ಹಲವು ಮಂದಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದರು. ಆದರೆ ಪ್ರಸ್ತುತ ಈ ಕ್ಷೇತ್ರದಲ್ಲಿ ಸಾಕಷ್ಟು ಕ್ರೈಸ್ತ ಸಮುದಾಯದ ಆಕಾಂಕ್ಷಿಗಳ ಹೊರತಾಗಿಯೂ ಯಾವುದೇ ಕ್ಷೇತ್ರದಲ್ಲಿ ಅವಕಾಶ ನೀಡದೆ ನಿರ್ಲಕ್ಷ ಮಾಡಿರುವುದು ಖೇದಕರ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿಪಿಎಂ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕುಂದಾಪುರ, ಫೆ.6: ಸಿಪಿಎಂ ಪಕ್ಷದ ಅಭ್ಯರ್ಥಿಗಳಾಗಿ ಕೋಟೇ ಶ್ವರ ಜಿಪಂ ಕ್ಷೇತ್ರಕ್ಕೆ ಜ್ಯೋತಿ ಉಪಾಧ್ಯ, ನಾಡ ತಾಪಂ ಕ್ಷೇತ್ರಕ್ಕೆ ರಾಜೀವ ಪಡುಕೋಣೆ, ಮರವಂತೆ ತಾಪಂ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಆಚಾರ್, ಕೋಟೇಶ್ವರ ತಾಪಂಗೆ ಜಯಂತಿ, ಆಲೂರು ತಾಪಂಗೆ ನಾಗರತ್ನಾ ನಾಡ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ದಾಸ್ ಭಂಡಾರಿ, ಎಚ್.ನರಸಿಂಹ, ಸುರೇಶ್ ಕಲ್ಲಾಗರ್, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.







