ಭ್ರೂಣಹತ್ಯೆಗೆ ಯತ್ನಿಸಿದ್ದ ಗೋವಾ ರಾಂಜ್ಯಪಾಲರ ತಾಯಿ!

ವಾರಣಾಸಿ: "ತಾಯಿ ನಲುವತ್ತನೇ ವಯಸ್ಸಿನಲ್ಲಿ ಗರ್ಭ ಧರಿಸಿದ ಕಾರಣದಿಂದ ನಾನು ಹುಟ್ಟುವ ಮುನ್ನವೇ ನನ್ನನ್ನು ಸಾಯಿಸಲು ನಿರ್ಧರಿಸಿದ್ದರು" ಎಂದು ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಬಹಿರಂಗಪಡಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರು ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವಾಗ, ನನ್ನ ತಂದೆ ನನ್ನ ಬದುಕನ್ನು ರಕ್ಷಿಸಿದ ಘಟನೆ ನೆನಪಾಗುತ್ತಿದೆ. 40 ವರ್ಷದ ಬಳಿಕ ಗರ್ಭ ಧರಿಸಿದ ಹಿನ್ನೆಲೆಯಲ್ಲಿ ನನ್ನ ತಾಯಿ ಗರ್ಭಪಾತ ಮಾಡಿಸಿಕೊಳ್ಳಲು ಗುಳಿಗೆ ನುಂಗಿದ್ದರು" ಎಂದು ಸಮಾರಂಭವೊಂದರಲ್ಲಿ ವಿವರಿಸಿದರು.
ಆದರೆ ಊರವರು ಏನೋ ಮಾತನಾಡಿಕೊಳ್ಳುತ್ತಾರೆ ಎಂಬ ಬಗ್ಗೆ ತಂದೆ ತಲೆ ಕೆಡಿಸಿಕೊಳ್ಳಲಿಲ್ಲ. ಗ್ರಾಮದಿಂದ ಪಕ್ಕದ ನಗರಕ್ಕೆ ಕರೆದೊಯ್ದು ಸುರಕ್ಷಿತ ಹೆರಿಗೆಗೆ ವ್ಯವಸ್ಥೆ ಮಾಡಿದರು. ಹಲವು ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿದ ತಂದೆ ಉತ್ತಮ ಶಿಕ್ಷಣ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಟ್ಟರು ಎಂದು ಮೃದುಲಾ ಹೇಳಿದರು.
ಬೇಟಿ ಬಜಾವೊ, ಬೇಟಿ ಪಟಾವೊ ಘೋಷವಾಕ್ಯದಲ್ಲಿ ಪರಿವಾರ್ ಬಚಾವೊ ಎಂಬ ಪದವನ್ನೂ ಸೇರಿಸಬೇಕು ಎಂದು ಸಲಹೆ ಮಾಡಿದರು. ಹೆಣ್ಣುಮಕ್ಕಳನ್ನು ಗಂಡುಮಗುವಿನಂತೆ ಬೆಳೆಸಬೇಕು ಎಂಬ ವಾಡಿಕೆಯ ಮಾತಿದೆ. ಈ ಚಿಂತನೆ ಬದಲಾಗಿ, ಇದೀಗ ಹೆಣ್ಣುಮಕ್ಕಳೂ ಉತ್ತಮ ಶಿಕ್ಷಣ ಪಡೆಯುವ ಸ್ಥಿತಿ ಗ್ರಾಮಗಳಲ್ಲೂ ಬಂದಿದೆ ಎಂದರು.





