ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಎಚ್ಚೆತ್ತುಕೊಂಡ ’ಸ್ಮತಿ’

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಲ್ಲಿ ಮುಗಿಲು ಮುಟ್ಟಿರುವ ಜಾತಿ ಆಧರಿತ ತಾರತಮ್ಯ ಕೊನೆಗೂ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಯವರ ಕಣ್ಣು ತೆರೆಸಿದೆ. ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗಳಲ್ಲಿ ಇಂಥ ತಾರತಮ್ಯ ಎದುರಾಗದೇ ಇರಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಭೆ ಕರೆದಿದ್ದಾರೆ.
ದೇಶದ ಎಲ್ಲ 46 ಕೇಂದ್ರೀಯ ವಿವಿಗಳ ಕುಲಪತಿಗಳ ಜತೆ ಸ್ಮತಿ ಇರಾನಿ ಈ ತಿಂಗಳ 18ರಂದು ಚರ್ಚೆ ನಡೆಸಲಿದ್ದಾರೆ. ಹೈದ್ರಾಬಾದ್ ಕೇಂದ್ರೀಯ ವಿವಿಯಲ್ಲಿ ಇಂಥ ತಾರತಮ್ಯಕ್ಕೆ ಒಳಗಾಗಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ವೆಮುಲಾ ಪ್ರಕರಣವನ್ನು ವಿರೋಧ ಪಕ್ಷಗಳು, ಫೆಬ್ರವರಿ 23ರಿಂದ ಆರಂಭವಾಗುವ ಸಂಸತ್ ಅಧಿವೇಶನಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇದ್ದು, ದಲಿತ ವಿದ್ಯಾರ್ಥಿ ನಾಯಕನ ಅಮಾನತಿಗೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಒತ್ತಡ ಹೇರಿದ್ದರು ಎಂಬ ಅಂಶ ಚರ್ಚೆಗೆ ಬರುವ ಸಾಧ್ಯತೆ ಇದೆ.





