ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‌ನಿಂದ ಹರೇಕಳ ಹಾಜಬ್ಬರಿಗೆ ಮನೆ ಹಸ್ತಾಂತರ

ಕೊಣಾಜೆ, ಫೆ.7: ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಮಂಗಳೂರಿನ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಹರೇಕಳದ ನ್ಯೂಪಡ್ಪುವಿನಲ್ಲಿ ನಿರ್ಮಿಸಿಕೊಟ್ಟಿರುವ ನೂತನ ತಾರಸಿ ಮನೆ ಹಸ್ತಾಂತರ ಹಾಗೂ ಗೃಹಪ್ರವೇಶ ಕಾರ್ಯಕ್ರಮ ರವಿವಾರ ಬೆಳಗ್ಗೆ ಜರಗಿತು.
ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ನೂತನ ಮನೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು. ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಆಲ್ಬನ್ ಮಿನೇಜಸ್, ಮುಡಾ ಆಯುಕ್ತ ನಝೀರ್, ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ಮಂಗಳೂರು ತಾಪಂ ಸದಸ್ಯ ಮುಹಮ್ಮದ್ ಮುಸ್ತಫಾ, ಹರೇಕಳ ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಹರೇಕಳ ಹಾಜಬ್ಬರನ್ನು ಮಾಧ್ಯಮದೆದುರು ತೆರೆದಿಟ್ಟ ಪತ್ರಕರ್ತ ಗುರುವಪ್ಪ ಬಾಳೆಪುಣಿ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಆಲ್ಬನ್ ಮಿನೇಜಸ್‌ರನ್ನು ಹರೇಕಳ ಹಾಜಬ್ಬರ ಸಮ್ಮುಖದಲ್ಲಿ ಸಚಿವ ಯು.ಟಿ.ಖಾದರ್ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲು ಸನ್ಮಾನಿಸಿ, ಅಭಿನಂದಿಸಿದರು.
ಕರಾವಳಿಯ ‘ಅಕ್ಷರ ಸಂತ’ ಎಂದೆ ಪ್ರಖ್ಯಾತರಾಗಿರುವ ಹರೇಕಳದ ಹಾಜಬ್ಬ ತನ್ನ ದುಡಿಮೆಯ ಎಲ್ಲಾ ಸಂಪತ್ತನ್ನು ಬಡಮಕ್ಕಳ ವಿದ್ಯೆಗೋಸ್ಕರವೆ ವ್ಯಯಿಸಿ ತನ್ನ ಸ್ವಂತ ಸೂರಿನ ಬಗ್ಗೆ ಆಲೋಚಿಸದ್ದ್ದುದರಿಂದ, ಅವರು ವಾಸ್ತವ್ಯ ಹೂಡಿರುವ ಮನೆಯು ಸಂಪೂರ್ಣವಾಗಿ ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿತ್ತು. ಈ ಬಗ್ಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಮುತುವರ್ಜಿ ವಹಿಸಿ ಅವರಿಗೆ ಸುಸಜ್ಜಿತ ಮನೆ ಕಟ್ಟಿ ಕೊಡಲು ನಿರ್ಧರಿಸಿತ್ತು. ಅದರಂತೆ ಸುಮಾರು 15 ಲಕ್ಷ ರೂ. ವೆಚ್ಚದ 860 ಚದರ ಅಡಿಯ ಈ ತಾರಸಿ ಮನೆ ನಿರ್ಮಾಣ ಕಾರ್ಯವು ಕಳೆದ ಸೆಪ್ಟಂಬರ್ 13ರಂದು ಆರಂಭಗೊಂಡಿತ್ತು. ಅಂದು ನಡೆದ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದ್ದರು.



.jpg)
.jpg)
.jpg)







