ಬಜ್ಪೆ : ಪೆರಾರ ಶ್ರೀ ಬಲಾಂಡಿ ದೈವಸ್ಥಾನದಲ್ಲಿ ಕಳ್ಳತನ

ಬಜ್ಪೆ, ಫೆ.7: ಇಲ್ಲಿನ ಪೆರಾರ ಶ್ರೀ ಬಲಾಂಡಿ ದೈವಸ್ಥಾನದ ಶನಿವಾರ ತಡರಾತ್ರಿ ಬಾಗಿಲು ಮುರಿದು ಹೊಳಹೊಕ್ಕ ಕಳ್ಳರು ನಗ-ನಗದು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕಳ್ಳರು ದೇವರ ಮೂರ್ತಿಯ ಪೀಠ, ಪೂಜೆಗೆ ಬಳಸುವ ಬೆಳ್ಳಿಯ ಸಾಮಗ್ರಿಗಳು ಸೇರಿದಂತೆ ಹುಂಡಿಯ ಹಣ ದೋಚಿದ್ದರು. ಸ್ವಲ್ಪ ದೂರದ ವರೆಗೆ ಹೋದ ಬಳಿಕ ಎಲ್ಲಾ ವಸ್ತುಗಳನ್ನು ಪಕ್ಕದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀ ಬಲಾಂಡಿ ದೈವಸ್ಥಾನದ ಕಾಂಪೌಂಡ್‌ನ ಒಳಭಾಗದಲ್ಲಿ ಮೂರು ಗುಡಿಗಳು ಇದ್ದು ಕಳ್ಳರು ಮುಖ್ಯ ಗುಡಿಯಲ್ಲಷ್ಟೇ ಕಳವು ಮಾಡಿದ್ದಾರೆ. ಇದೇ ರೀತಿ ತಿಂಗಳ ಹಿಂದೆಯೂ ಕಳ್ಳತನದ ಪ್ರಯತ್ನಗಳನ್ನು ನಡೆಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಪೆರಾರ ಶ್ರೀ ಬಲಾಂಡ್ಯ ದೈವಸ್ಥಾನದಲ್ಲಿ ಮಿಜಾರು ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಹಾಗೂ ಕಿನ್ನಿಗೋಳಿ ಬಳಿಯ ಮೂರು ಕಾವೇರಿಯ ಮಹಾಮ್ಮಯಿ ದೇವಸ್ಥಾನದಲ್ಲಿ ನಡೆದ ರೀತಿಯಲ್ಲಿಯೇ ಕಳವು ನಡೆದಿದ್ದು, ಒಂದೇ ತಂಡದ ಕೈಚಳಕ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.







