ಕಾಸರಗೋಡು: ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ: ಯುವಕನ ಬಂಧನ

ಕಾಸರಗೋಡು: ಹದಿನೈದರ ಹರೆಯದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡು ಪ್ರೇರಂಬ್ರ ಕಾಯಣ್ಣ ನಿವಾಸಿ, ಬೆಂಗಳೂರಿನಲ್ಲಿ ಹೋಟೇಲ್ ನೌಕರನಾದ ಬಿಜು(36) ಬಂಧನಕ್ಕೊಳಗಾದ ಯುವಕ. ಈತನನ್ನು ಡಿಐಪಿ ಕೆ. ಸುಧಾಕರನ್ ಬಂಧಿಸಿದ್ದಾರೆ. ಬೆಂಗಳೂರಿನಿಂದ ಬಾಲಕಿಯೊಂದಿಗೆ ರೈಲಿನಲ್ಲಿ ಮರಳುತ್ತಿದ್ದ ಮಧ್ಯೆ ಬಂಧಿಸಲಾಗಿದೆ. ಉಳಿಯತ್ತಡ್ಕ ಪರಿಸರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸವಿರುವ ಬಾಲಕಿಗೆ ಮಿಸ್ಡ್‌ಕಾಲ್ ಮೂಲಕ ಬಿಜುವಿನ ಪರಿಚಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶಿರಿಯದಲ್ಲಿರುವ ಸ್ನೇಹಿತೆಯ ಮನೆಗೆ ತೆರಳುವುದಾಗಿ ಹೇಳಿ ಬಾಲಕಿ ಹೊರಟಿದ್ದಳು. ಸಂಜೆಯಾದರೂ ಮರಳದಿರುವುದರಿಂದ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಮೊಬೈಲ್ ಫೋನ್ ಕೇಂದ್ರೀಕರಿಸಿ ಸೈಬರ್ ಸೆಲ್ ಮೂಲಕ ನಡೆಸಿದ ತನಿಖೆಯಲ್ಲಿ ಬಾಲಕಿ ಬಿಜು ಜತೆಗಿರುವುದು ಸ್ಪಷ್ಟಗೊಂಡಿತ್ತು. ಬಾಲಕಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ, ಲಾಡ್ಜ್‌ನಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





