ಔಷಧ ಕಂಪೆನಿಗಳಿಂದ ಕೊಡುಗೆ ಸ್ವೀಕರಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ

ನವದಿಲ್ಲಿ: ದೇಶದ ಔಷಧ ಕಂಪೆನಿಗಳ ಮತ್ತು ವೈದ್ಯರು ಸೇರಿ ನಡೆಸುತ್ತಿರುವ ಹಗಲು ದರೋಡೆ ತಡೆಯಲಿಕ್ಕಾಗಿ ಕಠಿಣ ಮಾರ್ಗಸೂಚಿಗಳನ್ನು ಮೆಡಿಕಲ್‌ಕೌನ್ಸಿಲ್ ಆಫ್ ಇಂಡಿಯಾ ಮಂದಿಟ್ಟಿದೆ. ಔಷಧ ಕಂಪೆನಿಗಳ ಹಿತಕ್ಕೆ ತಕ್ಕಂತೆ ವೈದ್ಯರು ವರ್ತಿಸಿದರೆ ಅಂತಹ ವೈದ್ಯರಿಗೆ ಕಠಿಣ ಶಿಕ್ಷೆ ನೀಡುವುದಕ್ಕೆ ಸಾಧ್ಯವಾಗುವ ಮಾರ್ಗಸೂಚಿಯನ್ನು ಅದು ತಯಾರಿಸಿದೆ. ಔಷಧಕಂಪೆನಿಗಳ ಸಹಾಯದಲ್ಲಿ ಸಂಶೋಧನೆ ನಡೆಸುವುದಕ್ಕೆ ಮಾತ್ರ ಮಾರ್ಗಸೂಚಿಯಲ್ಲಿ ನಿಷೇಧ ಹೇರಲಾಗಿಲ್ಲ. ಆದರೆ ಸಂಶೋಧನೆಗೆ ಪೂರ್ವಭಾವಿ ಅನುಮತಿ ಕೇಳಬೇಕಾಗಿದೆ. ಇದನ್ನು ಉಲ್ಲಂಘಿಸಿದ ವೈದ್ಯರಿಗೆ ಮೊದಲು ಎಚ್ಚರಿಕೆ ನೀಡಲಾಗುವುದು. ನಂತರ ಅವರ ವಿರುದ್ಧ ನಿಷೇಧ ಹೇರಲಾಗುವುದು.
ಔಷಧ ಕಂಪೆನಿಗಳು ನೀಡುವ ಕೊಡುಗೆಗಳನ್ನು ಮತ್ತು ಅವರು ನೀಡುವ ವಿದೇಶ ಪ್ರಯಾಣದ ಆಫರ್‌ಗಳನ್ನು ಸ್ವೀಕರಿಸುವ ವೈದ್ಯರು ಶಿಕ್ಷಾ ಕ್ರಮಕ್ಕೊಳಗಾಗಲಿರುವರು. ವೈದ್ಯರ ರಿಜಿಸ್ಟ್ರೇಷನ್ ರದ್ದು ಪಡಿಸಲಾಗುವುದು. 5000-10000 ರೂ.ವರೆಗೆ ಕೊಡುಗೆಗಳನ್ನು ಸ್ವೀಕರಿಸಿದ ವೈದ್ಯರ ರಿಜಿಸ್ಟ್ರೇಶನನ್ನು ಮೂರು ತಿಂಗಳಿಗೂ, 10,000ದಿಂದ ಐವತ್ತು ಸಾವಿರರೂವರೆಗೆ ಕೊಡುಗೆ ಸ್ವೀಕರಿಸಿದ ವೈದ್ಯರ ರಿಜಿಸ್ಟ್ರೇಶನ್ ಆರು ತಿಂಗಳಿಗೂ ಒಂದು ಲಕ್ಷ ಕೊಡುಗೆ ಸ್ವೀಕರಿಸಿದವರ ರಿಜಿಸ್ಟ್ರೇಶನನ್ನು ಒಂದು ವರ್ಷದವರೆಗೆ ನಿಷೇಧ ಹೇರಲಾಗುವುದು. ಮತ್ತು ಈ ಅಪರಾಧವನ್ನು ಪುನರಾವರ್ತಿಸುತ್ತಲಿದ್ದರೆ ಆಜೀವ ನಿಷೇಧ ಶಿಕ್ಷೆಗೊಳಗಾಗಲಿರುವರು.
ಔಷಧ ಕಂಪೆನಿಗಳಿಂದ ಪಾರಿತೋಷಕ ಇತ್ಯಾದಿ ಸ್ವೀಕರಿಸುವ ವೈದ್ಯರ ಮೇಲೆ ನಿಗಾ ಇರಿಸಲಾಗುವುದು. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗುವುದು. ವೈದ್ಯರಿಗೆ ಉಚಿತ ಕೊಡುಗೆ ನೀಡುವ ಕಂಪೆನಿಗಳು ಔಷಧದ ಬೆಲೆಯನ್ನು ದುಪ್ಪಟ್ಟಿಗಿಂತಲೂ ಅಧಿಕಗೊಳಿಸಿ ರೋಗಿಗಳಿಂದ ವಸೂಲು ಮಾಡುತ್ತಿವೆ. ಈಗಾಗಲೇ ಔಷಧ ಕಂಪೆನಿಗಳಿಂದ ಚಿನ್ನಾಭರಣ, ಪ್ಲಾಟ್‌ಗಳನ್ನು ಪಡೆದಿರುವ ಮುನ್ನೂರಕ್ಕೂ ಅಧಿಕ ವೈದ್ಯರ ವಿರುದ್ಧ ಮೆಡಿಕಲ್ ಕೌನ್ಸಿಲ್ ಶಿಸ್ತು ಕ್ರಮಕೈಗೊಂಡಿತ್ತು. ಇದರ ಮುಂದುವರಿದ ಭಾಗವಾಗಿ ಈ ಮಾರ್ಗಸೂಚಿಯನ್ನು ಅದು ಬಿಡುಗಡೆಗೊಳಿಸಿದೆ.







