ಮಂಗಳೂರು : ದೇಶದಲ್ಲಿ ಅಸಹಿಷ್ಣುತೆಯಿಂದ ಮಹಿಳಾ ದೌರ್ಜನ್ಯ ಹೆಚ್ಚಳ:ಶಾಹಿದಾ

ಮಂಗಳೂರು,ಫೆ.7:ಮೋದಿ ನೇತೃತ್ವದ ಸರಕಾರದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದ್ದು ಮುಕ್ತ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡಲಾಗುತ್ತಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ದೌರ್ಜನಕ್ಕೆ ಮಹಿಳೆಯರು ಮೊದಲು ತುತ್ತಾಗುತ್ತಿದ್ದಾರೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ರಾಷ್ಟ್ರಾಧ್ಯಕ್ಷೆ ಶಾಹಿದಾ ಮಂಗಳೂರು ಹೇಳಿದರು.
ನಗರದಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್ (ಎನ್.ಡಬ್ಲು.ಎಫ್)ನ ನೇತೃತ್ವದಲ್ಲಿ ನಗರದ ಬಲ್ಮಠ ಸರ್ಕಲ್ ಬಳಿಯ ಶಾಂತಿ ನಿಲಯದಲ್ಲಿ ಇಂದು ನಡೆದ ರಾಷ್ಟ್ರೀಯ ಸಾರಥಿಗಳಿಗೆ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದಿನ ಪರಿಸ್ಥಿತಿಗೆ ಭಿನ್ನವಾಗಿ ಪ್ರಸಕ್ತ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆಯವುದರಲ್ಲಿ ಮುಂದೆ ಇದ್ದಾರೆ. ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯು ಆಗಿದೆ.ಮುಸ್ಲಿಂ ಮಹಿಳೆಯರು ಧಾರ್ಮಿಕ, ಸಾಮಾಜಿಕ ಚೌಕಟ್ಟಿನೊಳಗೆ ಶಿಕ್ಷಣ ಪಡೆಯುತ್ತಿದ್ದು ಅವರನ್ನು ತಲೆವಸ್ತ್ರ ಮುಂತಾದ ವಿಚಾರಗಳ ಮೂಲಕ ಶಿಕ್ಷಣದಿಂದ ಹಿಂದೆ ಸರಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆಪಾದಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಮಾನವಸಂನ್ಮೂಲ ಸಚಿವಾಲಯ ಮೂಗು ತೂರಿಸುತ್ತಿದ್ದು ಇದರಿಂದ ಎಬಿವಿಪಿಯ ಗೂಂಡಾಗಿರಿಯು ಜಾಸ್ತಿಯಾಗಿದೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಭ್ರೂಣ ಪತ್ತೆ ಸಂಬಂಧ ತೆಗೆದುಕೊಂಡಿರುವ ನಿಲುವಿನಿಂದ ಮಹಿಳೆಯರು ದೌರ್ಜನ್ಯಕ್ಕೆ ತುತ್ತಾಗುವ ಸಾಧ್ಯತೆಯೆ ಅಧಿಕವಿದೆ. ಈಗಾಗಲೆ ಗೌಪ್ಯವಾಗಿ ನಡೆಯುತ್ತಿರುವ ಭ್ರೂಣಪತ್ತೆಯಿಂದ ಹೆಣ್ಣುಮಕ್ಕಳ ಭ್ರೂಣಹತ್ಯೆ ನಡೆಯುತ್ತಿದ್ದು ಸರಕಾರದಿಂದ ಲಿಂಗ ಪತ್ತೆಗೆ ಅನುಮತಿ ಸಿಕ್ಕರೆ ಇನ್ನಷ್ಟು ಅಪಾಯಕಾರಿ ಬೆಳವಣಿಗೆಯಾಗಬಹುದು.ಮೇನಕಾ ಗಾಂಧಿಯ ಸಲಹೆಯನ್ನು ವಿರೋಧಿಸಬೇಕಾಗಿದೆ. ಮೇನಕಾ ಗಾಂಧಿ ಕುಟುಂಬ ಹಂತಕರಾಗುವುದು ಬೇಡ ಎಂದು ಅವರು ಹೇಳಿದರು.
ದೇಶದಲ್ಲಿ ್ದ ಆಹಾರ ಸ್ವಾತಂತ್ರವನ್ನು ನಿರ್ಬಂಧಿಸುವ ಮೂಲಕ ಸಂವಿಧಾನದತ್ತವಾದ ಹಕ್ಕನ್ನು ಕಸಿಯಲಾಗುತ್ತದೆ. ಮಹಿಳೆ ಸಂಕಷ್ಟದಲ್ಲಿದ್ದು ಮಹಿಳೆಯರ ಮೇಲೆ ದಿನನಿತ್ಯ ಆಕ್ರಮಣ ನಡೆಯುತ್ತಲೆ ಇದೆ. ಮಹಿಳೆಯರೆ ಸಮಸ್ಯೆ ಎಂದು ಬಿಂಬಿಸಲಾಗುತ್ತಿದೆ. ಸಾಚಾರ್ ವರದಿಯಲ್ಲಿ ಮುಸ್ಲಿಂ ಮಹಿಳೆಯರು ಅತ್ಯಂತ ಹೀನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ವರದಿ ನೀಡಲಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2016-17 ಅವಧಿಗೆ ರಾಷ್ಟ್ರಧ್ಯಕ್ಷೆಯಾಗಿ ಆಯ್ಕೆಯಾದ ಕೇರಳದ ಝೈನಬಾ ಎ.ಎಸ್, ಪ್ರ.ಕಾರ್ಯದರ್ಶಿ ಕರ್ನಾಟಕದ ಲುಬ್ನಾ ಮೆನ್ಹಝ್ ಶೇಕ್, ಉಪಾಧ್ಯಕ್ಷೆ ತಮಿಳುನಾಡಿನ ಫಾತಿಮ ಅಲಿಮಾ, ಕಾರ್ಯದರ್ಶಿ ಕೇರಳದ ಫರೀದಾ ಹಸನ್ ರಾಷ್ಟ್ರೀಯ ಸಮಿತಿ ಸದಸ್ಯೆಯರಾದ ತಮಿಳುನಾಡಿನ ನಸೀಮಾ, ಕರ್ನಾಟಕ ನೌಶಿರಾ, ಕೇರಳದ ರಮ್ಲಾ, ಗೋವಾದ ರಹಿಯನತ್, ತಮಿಳುನಾಡಿನ ಶಹನಝ್ , ಕರ್ನಾಟಕದ ಶಾಹಿದ ಅಸ್ಲಂ, ಕೇರಳದ ಶರೀನಾ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ಕರ್ನಾಟಕ ರಾಜ್ಯಧ್ಯಕ್ಷೆ ಫಾತಿಮ ನಸೀಮ ವಹಿಸಿದ್ದರು. ಸಮಾರಂಭದಲ್ಲಿ ವಿಮೆನ್ಸ್ ಇಂಡಿಯ ಮೂವ್‌ಮೆಂಟ್‌ನ ಅಧ್ಯಕ್ಷೆ ಯಸ್ಮೀನ್ ಫರೂಖಿ ರಾಜಸ್ಥಾನ್ ಉಪಸ್ಥಿತರಿದ್ದರು. ಎನ್‌ಡಬ್ಲುಎಫ್ ರಾಜ್ಯ ಪ್ರ.ಕಾರ್ಯದರ್ಶಿ ಶಾಹಿದ ಯುಸೂಫ್ ಸ್ವಾಗತಿಸಿದರು. ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಝುಲೈಕಾ ಬಜ್ಪೆ ವಂದಿಸಿದರು.
ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಪ್ರತಿನಿಧಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ:
ಪತ್ತೂರಿನಲ್ಲಿ ಶನಿವಾರ ಮತ್ತು ಆದಿತ್ಯವಾರ ನಡೆದ ಎರಡು ದಿನಗಳ ಎನ್‌ಡಬ್ಲುಎಫ್ ನ ರಾಷ್ಟ್ರೀಯ ಪ್ರತಿನಿಧಿಗಳ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮುಸ್ಲಿಂ ವೈಯಕ್ತಿಕ ಕಾನೂನನ್ನು ಸರಕಾರ ಗೌರವಿಸಬೇಕು, ಶಿಕ್ಷಣವನ್ನು ಕೇಸರಿಕರಣಗೊಳಿಸಬಾರದು, ವಿಚಾರವಾದಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು, ಮಹಿಳಾ ಮೀಸಲಾತಿ ಮಸೂದೆಯಲಿ ್ಲ ಮುಸ್ಲಿಂ ಹಿಂದುಳಿದ ವರ್ಗ ಮಹಿಳೆಯರಿಗೆ ಶೇಕಡ 33 ಒಳಮೀಸಲಾತಿ ಕಡ್ಡಾಯಗೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.







