ಬಂಟ್ವಾಳ : ನಾಪತ್ತೆಯಾಗಿದ್ದ ಮದ್ರಸ ಅದ್ಯಾಪಕರ ಮೃತದೇಹ ಪತ್ತೆ
ಬಂಟ್ವಾಳ, ಫೆ. 7: ತಾಲೂಕಿನ ಸಂಗಬೆಟ್ಟು ಪಾಲ್ಗುಣಿ ನದಿ ದಾಟುತ್ತಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದ ಮದರಸ ಅಧ್ಯಾಪಕರ ಮೃತ ದೇಹ ರವಿವಾರ ಸಂಜೆ ಪತ್ತೆಯಾಗಿದೆ.
ಪುತ್ತೂರು ಬನ್ನೂರು ನಿವಾಸಿ ಮುಹಮ್ಮದ್ ಅಫ್ರಿದ್(22) ಮೃತ ಅಧ್ಯಾಪಕ. ಸಂಗಬೆಟ್ಟು ಗಾಡಿಪಲ್ಕೆ ಸಮೀಪದ ಎಲ್ಯ ಎಂಬಲ್ಲಿನ ಮದರಸವೊಂದರಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು, ಶನಿವಾರ ಸಂಜೆ ಮದರಸ ಸಮೀಪದ ವ್ಯಕ್ತಿಯೊಬ್ಬರ ಜೊತೆ ಪಾಲ್ಗುಣಿ ನದಿಯ ಇನ್ನೊಂದು ಬದಿಯ ಇರುವೈಲ್ ಎಂಬಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದರು.
ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಇಬ್ಬರೂ ಕಾಲು ನಡಿಗೆಯಲ್ಲೇ ನದಿ ದಾಟಿದ್ದರು. ದರ್ಗಾದಿಂದ ವಾಪಸಾಗಲು ಇಬ್ಬರೂ ನದಿಗೆ ಇಳಿದಿದ್ದು ದಡಕ್ಕೆ ಬಂದು ನೋಡುವಾಗ ಅಫ್ರಿದ್ ನಾಪತ್ತೆಯಾಗಿದ್ದರು ಎಂದು ಅವರ ಜೊತೆಯಲ್ಲಿ ಇದ್ದ ವ್ಯಕ್ತಿ ತಿಳಿಸಿದ್ದಾರೆ. ಅವರು ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಸ್ಥಳೀಯರು ಸ್ಥಳಕ್ಕೆ ಬಂದು ಹುಡುಕಾಟ ನಡೆಸಿದ್ದರು. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಎಸ್ಸೈ ರಕ್ಷಿತ್ ಎ.ಕೆ. ನೇತೃತ್ವದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ರವಿವಾರ ಸಂಜೆ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







