ತೈವಾನ್ ಭೂಕಂಪ: ಸಾವಿನ ಸಂಖ್ಯೆ 24ಕ್ಕೆ
ತೈನನ್, ಫೆ. 7: ಭೀಕರ ಭೂಕಂಪದಿಂದ ತತ್ತರಿಸಿದ ದಕ್ಷಿಣ ತೈವಾನ್‌ನಲ್ಲಿ ಕುಸಿದು ಬಿದ್ದ ಅಪಾರ್ಟ್‌ಮೆಂಟ್ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 120 ಮಂದಿಯನ್ನು ಸಮರೋಪಾದಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಅದಾಗ್ಯೂ 24 ಮಂದಿ ಮೃತಪಟ್ಟಿದ್ಧಾರೆ. ಅಪಾರ್ಟ್‌ಮೆಂಟ್ ಕುಸಿತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ರಿಕ್ಟರ್‌ಮಾಪಕದಲ್ಲಿ 6.4 ತೀವ್ರತೆ ಹೊಂದಿದ್ದ ಈ ಭೂಕಂಪದಿಂದ 16 ಮಹಡಿಯ ಕಟ್ಟಡದ 100ಕ್ಕೂ ಹೆಚ್ಚು ಮನೆಗಳು ಶನಿವಾರ ಕುಸಿದಿದ್ದವು. ಈ ಸಂಕೀರ್ಣದ ಮನೆಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಈ ಸಂಕೀರ್ಣ ನಿರ್ಮಾಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವಿವರ ಪಡೆಯಲಾಗುತ್ತಿದೆ ಎಂದು ಮೇಯರ್ ವಿಲಿಯಮ್ ಲಾಯಿ ಪ್ರಕಟಿಸಿದ್ದಾರೆ. ಈಗಾಗಲೇ ನ್ಯಾಯಾಂಗ ಘಟಕವನ್ನು ಮತ್ತು ವಕೀಲರನ್ನು ಸಂಪರ್ಕಿಸಲಾಗಿದ್ದು, ತನಿಖೆ ನಡೆದಿದೆ ಎಂದು ಲಾಯಿ ವಿವರಿಸಿದ್ದಾರೆ.
ಅಗತ್ಯ ಬಿದ್ದರೆ ಭವಿಷ್ಯದಲ್ಲಿ ನಿವಾಸಿಗಳು ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಪರಿಹಾರ ಕಾರ್ಯಾಚರಣೆ ವೇಳೆ ಪುರಾವೆಗಳನ್ನು ಸಂರಕ್ಷಿಸಲು ಸೂಚಿಸಲಾಗಿದೆ. ಇದಕ್ಕಾಗಿಯೇ ಮೂರು ಸ್ವತಂತ್ರ ಸಂಘಟನೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಕಟ್ಟಡ ನಿರ್ಮಾಣಗಾರರು ನಿಯಮ ಉಲ್ಲಂಘಿಸಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಸಂಕೀರ್ಣ ನಿರ್ಮಾಣ ಸಂಸ್ಥೆ ಈಗಾಗಲೇ ವಹಿವಾಟು ಸ್ಥಗಿತಗೊಳಿಸಿದ್ದು, ಇದಕ್ಕೆ ಬಳಸಿದ ಪರಿಕರಗಳ ಗುಣಮಟ್ಟದ ಬಗ್ಗೆಯೂ ಸಂದೇಹವಿದೆ ಎಂದು ಸ್ಥಳೀಯ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ. ಈ ಕಟ್ಟಡದ ಲೋಪಗಳ ಬಗ್ಗೆ ಈ ಮೊದಲೇ ದೂರು ನೀಡಲಾಗಿತ್ತು ಎಂದು ಯೂ ಚಿನ್ ಸೆನ್ ಹೇಳಿದ್ದಾರೆ. ಅವರ ಅತ್ತೆ ಕುಟುಂಬದ ಎಂಟು ಮಂದಿ ಇನ್ನೂ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಕಟ್ಟಡದ ಗುಣಮಟ್ಟ ಸರಿ ಇಲ್ಲ. ಹಲವಾರು ಬಿರುಕುಗಳು ಕಾಣಿಸಿಕೊಂಡಿದ್ದು, ಹಿಂದಿನ ಕಂಪನದ ವೇಳೆ ಛಾವಣಿಗೆ ಅಳವಡಿಸಿದ್ದ ಟೈಲ್‌ಗಳು ಬಿದ್ದಿದ್ದವು. ಇದೀಗ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸರಕಾರ ಅಪರಾಧ ಪ್ರಕರಣ ದಾಖಲಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನೂ 126 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ 103 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ತೀರಾ ಆಳದಲ್ಲಿ ಸಿಲುಕಿಕೊಂಡಿರುವ ಅವರನ್ನು ತಲುಪಲು ಯಾವುದೇ ದಾರಿಗಳಿಲ್ಲ. ತುರ್ತು ಕಾರ್ಯಾಚರಣೆ ಸಿಬ್ಬಂದಿ ಅವಶೇಷಗಳನ್ನು ತೆಗೆಯುತ್ತಿದ್ದಾರೆ ಎಂದು ಲಾಯಿ ಹೇಳಿದ್ದಾರೆ. ಜನಗಣತಿ ಅಂಕಿ ಅಂಶಗಳ ಪ್ರಕಾರ 260 ಮಂದಿ ಅಲ್ಲಿ ವಾಸವಿದ್ದಾರೆ.







