ಉತ್ತರ ಕೊರಿಯಾದಿಂದ ಯಶಸ್ವಿ ಉಪಗ್ರಹ ಉಡ್ಡಯನ
ಬೀಜಿಂಗ್, ಫೆ.7: ಕ್ಯಾಂಗ್‌ಮ್ಯಾಂಗ್‌ಸಾಂಗ್-4 ಉಪಗ್ರಹದ ಉಡ್ಡಯನ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ರವಿವಾರ ಪ್ರಕಟಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9 ಗಂಟೆಗೆ ಈ ಭೂ ಸರ್ವೇಕ್ಷಣ ಉಪಗ್ರಹವನ್ನು ಉತ್ತರ ಪ್ಯಾಂಗಾನ್ ಪ್ರಾಂತದ ಸೊಹೈ ಬಾಹ್ಯಾಕಾಶ ಕೇಂದ್ರದಿಂದ ಆಗಸಕ್ಕೆ ಚಿಮ್ಮಲಾಯಿತು. ಇದು ಯಶಸ್ವಿಯಾಗಿ ಕಕ್ಷೆಗೆ ಸೇರಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿಯಾನ್‌ಹುವಾ ವರದಿ ಮಾಡಿದೆ.
ಉತ್ತರ ಕೊರಿಯಾದ ನೇತಾರ ಕಿಮ್ ಜಾಂಗ್ ಉನ್ ಅವರು ಉಪಗ್ರಹ ಉಡಾವಣೆ ಕುರಿತ ಆದೇಶಕ್ಕೆ ಶನಿವಾರ ಸಹಿ ಮಾಡಿದ್ದರು ಎಂದು ಅವರ ಸಹಿಯ ಕುರಿತ ಚಿತ್ರಗಳನ್ನು ಕೆಸಿಟಿವಿ ವರದಿ ಬಿತ್ತರಿಸಿದೆ. ಸೌರಮಂಡಲ ಕಕ್ಷೆಯಲ್ಲಿ 97.4 ಡಿಗ್ರಿಯಲ್ಲಿ 494.6 ಕಿಲೋಮೀಟರ್ ವೇಗದಲ್ಲಿ ಸುತ್ತುವ ಈ ಉಪಗ್ರಹ 94 ನಿಮಿಷ 24 ಸೆಕೆಂಡ್‌ಗಳಲ್ಲಿ ಒಂದು ಆವರ್ತ ಪೂರ್ಣಗೊಳಿಸಲಿದೆ ಎಂದು ರಾಷ್ಟ್ರೀಯ ಬ್ಯಾಹ್ಯಾಕಾಶ ಅಭಿವೃದ್ಧಿ ಆಡಳಿತದ ಪ್ರಕಟಣೆ ಹೇಳಿದೆ.
ಈ ಸಾಧನೆ ದೇಶದ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಹಾಗೂ ರಕ್ಷಣಾ ಸಾಮರ್ಥ್ಯದಲ್ಲಿ ಹೊಸ ಮೈಲುಗಲ್ಲಾಗಿದ್ದು, ಬಾಹ್ಯಾಕಾಶವನ್ನು ಸ್ವತಂತ್ರ ಹಾಗೂ ಶಾಂತಿಯುತ ಉದ್ದೇಶಕ್ಕೆ ಬಳಸುವ ಹಕ್ಕನ್ನು ದೊರಕಿಸಿಕೊಟ್ಟಿದೆ ಎಂದು ಪ್ರಕಟಣೆ ಬಣ್ಣಿಸಿದೆ.
ಉತ್ತರ ಕೊರಿಂಾದ ದಿವಂಗತ ನಾಯಕ ಕಿಮ್ ಜಾಂಗ್-2 ಅವರ ಹುಟ್ಟುಹಬ್ಬವಾದ ಡೇ ಆಪ್ ಶೈನಿಂಗ್ ಸ್ಟಾರ್‌ಗೆ ಒಂಬತ್ತು ದಿನ ಮುನ್ನ ಈ ಮಹತ್ವದ ಸಾಧನೆ ಸಾಧ್ಯವಾಗಿದೆ.
ಉಡಾವಣೆಗೆ ಜಾಗತಿಕ ಆಕ್ರೋಶ
ಕೊರಿಯಾ ಪಾಲಿಗೆ ಇದು ಅವಿಸ್ಮರಣೀಯ ದಿನ, ಆದರೆ ಕೊರಿಯಾ ಇತ್ತೀಚೆಗೆ ಉಡಾಯಿಸಿದ ದೂರಗಾಮಿ ರಾಕೆಟ್ ಇದೀಗ ಅಂತಾರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬಗೆಗಿನ ಮಾತುಕತೆಗೆ ಇದರಿಂದ ಅಡ್ಡಿ ಉಂಟಾಗಿದೆ. ಉತ್ತರ ಕೊರಿಯಾದ ಈ ಕ್ರಮವು ವಿಶ್ವಸಂಸ್ಥೆ ನಿರ್ಣಯದ ಉಲ್ಲಂಘನೆ ಎಂಬ ಅಭಿಪ್ರಾಯ ಅಂತಾರಾಷ್ಟ್ರೀಯ ವಲಯದಲ್ಲಿ ವ್ಯಕ್ತವಾಗಿದೆ. ಉತ್ತರ ಕೊರಿಯಾ ಉಡಾಯಿಸಿದ ಈ ಕ್ಷಿಪಣಿ ಅಮೆರಿಕ ವರೆಗಿನ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ವಿಶ್ವಸಂಸ್ಥೆ ಇದನ್ನು ಖಂಡನೀಯ ಎಂದಿದ್ದರೆ, ಜಪಾನ್, ಅಸಹನೀಯ ಎಂದು ಬಣ್ಣಿಸಿದೆ. ಮಿತ್ರರಾಷ್ಟ್ರವಾದ ಚೀನಾ ಕೂಡಾ ವಿಷಾದನೀಯ ಎಂದು ಹೇಳಿದೆ.
ಉತ್ತರ ಕೊರಿಯಾದ ಇತ್ತೀಚಿನ ಅಣ್ವಸ್ತ್ರ ಪರೀಕ್ಷೆಗೆ ಹೇಗೆ ಸ್ಪಂದಿಸಬೇಕು ಎಂಬ ಚಿಂತನೆಯಲ್ಲಿ ಇನ್ನೂ ಇದೆ. ಈ ಬೆಳವಣಿಗೆ ಬಳಿಕ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ರಕ್ಷಣಾ ಅಧಿಕಾರಿಗಳು, ದಕ್ಷಿಣ ಕೊರಿಯಾದಲ್ಲಿ ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನಿಯೋಜಿಸುವ ಬಗ್ಗೆ ಅಧಿಕೃತ ಮಾತುಕತೆ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಇದು ಈ ಸೂಕ್ಷ್ಮ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಗಲಿವೆ ಎಂಬ ಆತಂಕವನ್ನು ರಷ್ಯಾ ಹಾಗೂ ಚೀನಾ ವ್ಯಕ್ತಪಡಿಸಿವೆ.







