ಮತಾಫ್ ಜಾಗಗಳಿಗೆ ನೆರಳು

ಮದೀನ/ ಜಿದ್ದಾ, ಫೆ.7: ಮುಸಲ್ಮಾನರ ಪವಿತ್ರ ಯಾತ್ರಾಸ್ಥಳವಾದ ಇಲ್ಲಿನ ಕಾಬಾದಲ್ಲಿ ಯಾತ್ರಾರ್ಥಿಗಳು ತವಾಫ್(ಪ್ರದಕ್ಷಿಣೆ) ನಿರ್ವಹಿಸುವ ವೇಳೆ ಅಥವಾ ಪ್ರಾರ್ಥನೆ ಸಲ್ಲಿಸುವ ವೇಳೆ ಕೆಂಡದಂಥ ಬಿಸಿಲಿನಿಂದ ರಕ್ಷಣೆ ಪಡೆಯುವ ನಿರೀಕ್ಷೆ ಇದ್ದು, ಮತಾಫ್ ಪ್ರದೇಶಕ್ಕೆ ಸೂರು ಒದಗಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆದಿದೆ.
ಈ ಎರಡು ಪವಿತ್ರ ಮಸೀದಿ ಪ್ರದೇಶದ ಮುಖ್ಯಸ್ಥ ಶೇಖ್ ಅಬ್ದುರ್ರಹ್ಮಾನ್ ಅಲ್‌ಸುದಾಯಿಸ್ ಈ ಸಂಬಂಧ ಗ್ರಾಂಡ್ ಮಾಸ್ಕ್ ಪ್ರಾಜೆಕ್ಟ್ ಕಮಿಟಿಯ ಜತೆ ಹಣಕಾಸು ಸಚಿವಾಲಯದ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರವಾದಿ ಮಸೀದಿಯ ಜಾಗದಲ್ಲಿ ಹೂವಿನಂಥ ನೆರಳು ಕೊಡೆಗಳು ಪ್ರಮುಖ ಆಕರ್ಷಣೆಯಾಗಲಿದ್ದು, ಯಾತ್ರಾರ್ಥಿಗಳಿಗೆ ಇದು ಉಪಯುಕ್ತವೂ ಆಗಲಿದೆ. ಅದರಲ್ಲೂ ಮುಖ್ಯವಾಗಿ ಕಡುಬೇಸಿಗೆಯಲ್ಲಿ ಸಂದರ್ಶಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಸಭೆಯಲ್ಲಿ ಪವಿತ್ರ ಮಸೀದಿಯ ಗ್ರಂಥಾಲಯ, ಎಲೆವೇಟರ್‌ಗಳಿಗೆ ಪ್ರತ್ಯೇಕ ಗೇಟ್‌ವೇ, ಮಸಾ ವಿಸ್ತರಣೆಗೆ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ, ಮತಾಫ್ ವಿಸ್ತರಣೆ ವೇಳೆ ಹಾನಿಗೀಡಾದ ಕಿಂಗ್ ಫಹಾದ್ ವಿಸ್ತರಿತ ಆವರಣದ ಮೇಲ್ಮೈಗೆ ನೀರು ನಿರೋಧಕ ವ್ಯವಸ್ಥೆ ಕಲ್ಪಿಸುವುದು ಮತ್ತಿತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಿತು.





