ಪ್ರಕರಣಗಳ ಬಾಕಿಗೆ ನ್ಯಾಯಾಲಯಗಳ ಕಳಪೆ ಆಡಳಿತ ಕಾರಣ: ಅಧ್ಯಯನ
ಹೊಸದಿಲ್ಲಿ, ಫೆ.7: ದೇಶಾದ್ಯಂತ ಸುಮಾರು ಮೂರು ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿಯಿರುವುದಕ್ಕೆ ನ್ಯಾಯಾಲಯಗಳ ಕಳಪೆ ಆಡಳಿತ ಕಾರಣವಾಗಿದೆ ಎಂದು ಅಧ್ಯಯನವೊಂದು ಬೆಟ್ಟು ಮಾಡಿದೆ. ನ್ಯಾಯಾಂಗದಲ್ಲಿ ವ್ಯರ್ಥವಾಗುತ್ತಿರುವ ಸಮಯವನ್ನು ಅರ್ಧಕ್ಕೆ ತಗ್ಗಿಸಿದರೆ ಅದು ಹಾಲಿ ನ್ಯಾಯಾಧೀಶರ ಸಂಖ್ಯೆಯ ದುಪ್ಪಟ್ಟು ನ್ಯಾಯಾಧೀಶರನ್ನು ನೇಮಕಗೊಳಿಸಿದಂತಾಗುತ್ತದೆ ಎಂದೂ ಅದು ಹೇಳಿದೆ.
ಪ್ರಕರಣಗಳು ಬಾಕಿಯಿರುವುದಕ್ಕೆ ನ್ಯಾಯಾಧೀಶರ ಕೊರತೆ ಏಕೈಕ ಕಾರಣವೆನ್ನುವುದು ತಪ್ಪಾಗುತ್ತದೆ ಎಂದಿರುವ ನ್ಯಾಯಾಂಗ ಕಾರ್ಯಕರ್ತ ರಾಜ್ ಕಚ್ರೂ ಅವರು ನಡೆಸಿರುವ ಅಧ್ಯಯನವು,ವಿಚಾರಣೆಗಳನ್ನು ಆಗಾಗ್ಗೆ ಮುಂದೂಡುವುದು ವಿಳಂಬಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ ಎಂದು ಹೇಳಿದೆ. ಕಚ್ರೂ ದೇಶಾದ್ಯಂತ ‘‘ನ್ಯಾಯ ಯಾತ್ರಾ’’ಕೈಗೊಂಡಿದ್ದಾರೆ.
ವಿಳಂಬಗಳನ್ನು ಕಡಿಮೆಯಾಗಿಸಲು ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಿಗೆ ಕಾರ್ಯ ಹಂಚಿಕೆ ಪ್ರಕ್ರಿಯೆಯನ್ನು ಉತ್ತಮಗೊಳಿಸಬೇಕು ಮತ್ತು ನ್ಯಾಯಾಲಯಗಳಿಗೆ ದತ್ತಾಂಶ ವ್ಯವಸ್ಥಾಪನೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅಧ್ಯಯನವು ಹೇಳಿದೆ.
ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ನ್ಯಾಯಾಧೀಶರ ಸಂಖ್ಯೆಯು ಪಾಶ್ಚಾತ್ಯ ಜಗತ್ತಿಗಿಂತಲೂ ಕಡಿಮೆಯಿದೆ ಎಂಬ ವಾದ ದೋಷಪೂರಿತವಾಗಿದೆ,ಏಕೆಂದರೆ ದಿನಕ್ಕೆ 50 ರೂ.ಗಿಂತ ಕಡಿಮೆ ಗಳಿಕೆಯಲ್ಲಿ ಬದುಕು ದೂಡುತ್ತಿರುವ ಭಾರತದ ಶೇ.50ರಷ್ಟು ಜನಸಂಖ್ಯೆಗೆ ನ್ಯಾಯಾಂಗದ ಸಂಬಂಧವೇ ಇಲ್ಲ. ಭಾರತಕ್ಕೆ ಹೋಲಿಸಿದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಓರ್ವ ನ್ಯಾಯಾಧೀಶರು ಇತ್ಯರ್ಥಗೊಳಿಸುವ ಪ್ರಕರಣಗಳ ಸಂಖ್ಯೆಯ ತುಲನೆಯಾಗಬೇಕು ಎಂದು ಅದು ಒತ್ತಿ ಹೇಳಿದೆ.
ಇದೇ ರೀತಿ ಗಣನೀಯ ಸಂಖ್ಯೆಯಲ್ಲಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಹಾಲಿ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಇತ್ಯರ್ಥಗೊಳಿಸಬಹುದಾಗಿದೆ ಎಂದಿದ್ದಾರೆ.
ಪ್ರಕರಣಗಳ ಮುಂದೂಡಿಕೆ ವಿಳಂಬಕ್ಕೆ ಗಂಭೀರ ಕಾರಣವಾಗಿದೆ. ಅದು ಪ್ರತಿವಾದಿ ಪರ ವಕೀಲರ ವ್ಯೆಹಾತ್ಮಕ ಸಾಧನವಾಗಿಬಿಟ್ಟಿದೆ. ಇದನ್ನು ಸರಿಪಡಿಸಬೇಕಾಗಿದೆ. ಸರಳ ವ್ಯವಸ್ಥಾಪನೆಯ ಸಾಧನವೊಂದು ಈ ಮುಂದೂಡಿಕೆಗಳನ್ನು ಗಣನೀಯವಾಗಿ ತಗ್ಗಿಸಬಲ್ಲುದು ಎಂದಿದ್ದಾರೆ. ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ಪ್ರತಿಪಾದಿಸುತ್ತಿರುವ ಕಚ್ರೂ ನೇತೃತ್ವದ ಗುಂಪು ಈ ‘‘ನ್ಯಾಯ ಯಾತ್ರಾ’’ವನ್ನು ಜ.30ರಿಂದ ಆರಂಭಿಸಿದ್ದು, ತನ್ನ 35 ದಿನಗಳ ಪಯಣದಲ್ಲಿ 22 ರಾಜ್ಯಗಳಲ್ಲಿ ಜನರಲ್ಲಿ ನ್ಯಾಯಾಂಗ ಸುಧಾರಣೆಗಳ ಅಗತ್ಯದ ಬಗ್ಗೆ ಅರಿವು ಮೂಡಿಸಲಿದೆ.
ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಿವಿಲ್ ರಿಟ್ ಅರ್ಜಿಗಳ ಪ್ರಮಾಣ ಒಟ್ಟು ಪ್ರಕರಣಗಳ ಕಾಲುಭಾಗದಷ್ಟಿದೆ. ಈ ವರ್ಗದ ಅರ್ಜಿಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವ ಮೂಲಕ ಪ್ರಕರಣಗಳ ಬಾಕಿಯನ್ನು ಗಣನೀಯವಾಗಿ ತಗ್ಗಿಸಬಹುದು.
- ರಾಜ್ ಕಚ್ರೂ, ನ್ಯಾಯಾಂಗ ಕಾರ್ಯಕರ್ತ





