ಕೇಂದ್ರದ ಕ್ರಮಕ್ಕೆ ಔಷಧ ಉದ್ಯಮಿಗಳ ಆಕ್ರೋಶ
ಹೊಸದಿಲ್ಲಿ,ಫೆ.7: ಜೀವರಕ್ಷಕ ಔಷಧಿಗಳಿಗೆ ಅಬಕಾರಿ ಸುಂಕ ವಿನಾಯಿತಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು, ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಸೇರಿದಂತೆ, ಭಾರತದ ಹಲವು ಔಷಧೋದ್ಯಮಿಗಳು ತೀವ್ರವಾಗಿ ಖಂಡಿಸಿದ್ದಾರೆ.ಜೀವರಕ್ಷಕ ಔಷಧಿಗಳಿಗೆ, ಯಾವುದೇ ರೀತಿಯ ಸುಂಕವನ್ನು ವಿಧಿಸುವುದರಿಂದ ಭಾರತದ ಆರೋಗ್ಯಪಾಲನೆ ಅಭಿಯಾನಕ್ಕೆ ಹಿನ್ನಡೆಯುಂಟಾಗಲಿದೆಯೆಂದು ಮಜುಂದಾರ್ ಆತಂಕ ವ್ಯಕ್ತಪಡಿಸಿದ್ದಾರೆ. ‘‘ಒಂದು ದೇಶವಾಗಿ ನಾವು, ಜೀವರಕ್ಷಕ ಔಷಧಗಳಿಗೆ ಯಾವುದೇ ಸುಂಕದಿಂದ ವಿನಾಯಿತಿ ನೀಡಬೇಕು. ಸರಕಾರವು ಆರೋಗ್ಯಪಾಲನಾ ಅಭಿಯಾನದ ಬಗ್ಗೆ ಭಾರೀ ಪ್ರಚಾರ ಮಾಡುತ್ತಿದೆ. ಆದರೆ ಜೀವರಕ್ಷಕ ಔಷಧಿಗಳ ಮೇಲೆ ಸುಂಕವನ್ನು ಹೇರುವುದು ಈ ಅಭಿಯಾನಕ್ಕೆ ಹಿನ್ನಡೆಯುಂಟು ಮಾಡಲಿದೆ’’ ಎಂದವರು ಹೇಳಿದ್ದಾರೆ.
ಕಿರಣ್ ಮಜುಂದಾರ್ ಅವರ ಆತಂಕಕ್ಕೆ, ಭಾರತೀಯ ಔಷಧಿ ಉತ್ಪಾದಕ ಸಂಘಟನೆಯ ಮಹಾನಿರ್ದೇಶಕ ರಂಜನಾ ಸ್ಮೆತಾಸೆಕ್ ಕೂಡಾ ಧ್ವನಿಗೂಡಿಸಿದ್ದಾರೆ. ಸರಕಾರದ ಈ ನಡೆಯು ಭಾರತೀಯ ರೋಗಿಗಳು ಜೀವರಕ್ಷಕ ಔಷಧ ಅವಲಂಬಿಸುವುದಕ್ಕೆ ತಡೆಯೊಡ್ಡುವುದೆಂದು ಅವರು ಹೇಳಿದ್ದಾರೆ. ಜೀವರಕ್ಷಕ ಔಷಧಗಳಿಗೆ ಅಬಕಾರಿ ಸುಂಕ ಹೇರಿಕೆಯಿಂದ, ವಿಶೇಷವಾಗಿ ವಿದೇಶಿ ಉತ್ಪಾದಕರು ಪೂರೈಕೆ ಮಾಡುವ ಔಷಧಗಳನ್ನು ಅವಲಂಭಿಸಿರುವ ರೋಗಿಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆಯಂದು ಅಂತಾರಾಷ್ಟ್ರೀಯ ಮಾನವತಾಸಂಸ್ಥೆ ‘ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್’ನ ಕಾರ್ಯಕರ್ತೆ, ಖ್ಯಾತ ನ್ಯಾಯವಾದಿ ಲೀನಾ ಮೆಂಘಾನೆ ಹೇಳಿದ್ದಾರೆ.‘ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್’ ಸಂಸ್ಥೆಯು ಬಡರೋಗಿಗಳಿಗೆ ಯೋಗ್ಯಬೆಲೆಯಲ್ಲಿ ಔಷಧವನ್ನು ಒದಗಿಸುವ ಅಭಿಯಾನವನ್ನು ನಡೆಸುತ್ತಿದೆ.
ಅಬಕಾರಿ ಸುಂಕ ಹೇರಿಕೆಯಿಂದ ಕೆಲವು ಔಷಧಿಗಳ ದರಗಳು ಶೇ. 22ರಿಂದ ಶೇ.35ಕ್ಕೇರಲಿದೆಯೆಂದು, ಔಷಧ ಉದ್ಯಮ ವಲಯಗಳು ತಿಳಿಸಿವೆ.
ಇದೀಗ ಅಬಕಾರಿ ಹಾಗೂ ಕಸ್ಟಮ್ಸ್ (ಸಿಬಿಇಸಿ) ಕುರಿತ ಕೇಂದ್ರೀಯ ಮಂಡಳಿಯು, ಜೀವರಕ್ಷಕ ಔಷಧಿಗಳು ಸೇರಿದಂತೆ 74 ಔಷಧಿಗಳಿಗೆ ನೀಡಲಾಗುತ್ತಿರುವ ಅಬಕಾರಿ ಸುಂಕ ವಿನಾಯಿತಿಯನ್ನು ರದದುಪಡಿಸುವ ಬಗ್ಗೆ ಅಧಿಸೂಚನೆಯನ್ನು ಜಾರಿಗೊಳಿಸಿದೆ.







