ಜನೋಪಯೋಗಿ ಸಂಶೋಧನೆ ಮಾಡಲು ವಿಜ್ಞಾನಿಗಳಿಗೆ ಮೋದಿ ಕರೆ
ಭುವನೇಶ್ವರ, ಫೆ.7: ಜನರಿಗೆ ಉಪಯೋಗವಾಗುವ ಸಂಶೋಧನೆಗಳನ್ನು ನಡೆಸುವಂತೆ ಹಾಗೂ ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ಲಭ್ಯವಾಗಬಹುದಾದ, ದೋಷರಹಿತ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗಿಂದು ಕರೆ ನೀಡಿದ್ದಾರೆ.
ಭುವನೇಶ್ವರದ ಜತ್ನಿಯ ಬಳಿ, ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್‌ಐಎಸ್‌ಇಆರ್) ಹೊಸ ಕ್ಯಾಂಪಸ್ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಂಶೋಧನೆಯಲ್ಲಿ ತೊಡಗಿರುವ ಪ್ರತಿಯೊಬ್ಬನಿಗೂ ನೋಬೆಲ್ ಪ್ರಶಸ್ತಿ ದೊರಕದಿರಬಹುದು. ಆದರೆ, ತಮ್ಮ ಸಂಶೋಧನೆ ಜನಸಾಮಾನ್ಯರಿಗೆ ಉಪಯುಕ್ತವಾಗಿಸುವುದು ಅವರಿಗೆ ಸಲ್ಲುವ ನಿಜವಾದ ಪ್ರಶಸ್ತಿಯಾಗಿದೆ ಎಂದರು.
ದೇಶದ ಪಾರಂಪರಿಕ ಜ್ಞಾನದ ಬಗ್ಗೆ ಮಾತನಾಡಿದ ಮೋದಿ, ಪುರಾತನ ಗ್ರಂಥಗಳಿಂದ ಜ್ಞಾನವನ್ನು ಸಂಗ್ರಹಿಸುವ ಮೂಲಕ ಡಾ. ಮಂಜುಳ್ ಭಾರ್ಗವ, ಮಹಾನ್ ಗಣಿತ ಶಾಸ್ತ್ರಜ್ಞರಲ್ಲಿ ಒಬ್ಬರಾದರು. ಅವರ ತಂದೆ ಸಂಸ್ಕೃತ ವಿದ್ವಾಂಸರಾಗಿದ್ದರು. ನಾವು ಪಾರಂಪರಿಕ ಜ್ಞಾನವನ್ನು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಜೋಡಿಸಬೇಕೆಂದು ಸಲಹೆ ನೀಡಿದರು.
ಶೂನ್ಯ ಪರಿಣಾಮ ಮತ್ತು ಶೂನ್ಯ ದೋಷದೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ದೊರೆಯುವಂತೆ ಮಾಡುವುದು ನಮ್ಮ ಆದ್ಯತೆಯಾಗಬೇಕು. ಶೂನ್ಯ ಪರಿಣಾಮವೆಂದರೆ, ವಾತಾವರಣದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗದಿರುವುದು ಹಾಗೂ ಪಾರ್ಶ್ವ ಪರಿಣಾಮಗಳಿಂದ ಮುಕ್ತವಾದುದೆಂದು ಅವರು ಸ್ಪಷ್ಟಪಡಿಸಿದರು.
ಒಡಿಶಾದಲ್ಲಿ ಯಥೇಚ್ಛ ಕಲ್ಲಿದ್ದಲು ನಿಕ್ಷೇಪವಿದೆ. ಇಲ್ಲಿ ಕಲ್ಲಿದ್ದಲು ಅನಿಲ ಅಭಿವೃದ್ಧಿಪಡಿಸಬಹುದಾದ ಸುಲಭ, ಅಗ್ಗ ಹಾಗೂ ಹಸಿರು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು. ಭಾರತದ ಆಕಾಶ ಹಾಗೂ ಸಾಗರಗಳು ಮುಟ್ಟದೆಯೇ ಉಳಿದಿವೆ. ಜನಸಾಮಾನ್ಯರ ಲಾಭಕ್ಕಾಗಿ ಸಂಪನ್ಮೂಲವನ್ನು ಸಂಶೋಧಿಸಿ ಉಪಯೋಗಿಸಬೇಕೆಂದು ವಿಜ್ಞಾನಿ ಸಮುದಾಯಕ್ಕೆ ಪ್ರಧಾನಿ ಕರೆ ನೀಡಿದರು.
ನಮ್ಮ ಪೂರ್ವಜರು ಸಾಗರವನ್ನು ‘ರತ್ನ ಗರ್ಭ’ ಎಂದು ಏಕೆ ವರ್ಣಿಸಿದ್ದಾರೆ. ಅದು ಸಾಗರದಲ್ಲಿರುವ ಸಂಪತ್ತಿನ ಕಾರಣಕ್ಕಾಗಿ, ಸಾಗರದ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಯಬೇಕು. ಮಂಗಳಯಾನದ ಮೂಲಕ ಭಾರತವು ಈಗಾಗಲೇ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿದೆ. ವಿಜ್ಞಾನಿಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಂಶೋಧನೆ ಆರಂಭಿಸಿದ್ದಾಗ ಅವರಿಗೆ ಸಾಕಷ್ಟು ಅನುಕೂಲವಿರಲಿಲ್ಲ. ಆದರೂ ಅವರು ಯಶಸ್ವಿಯಾದರೆಂಬುದನ್ನು ಪ್ರಧಾನಿ ನೆನಪಿಸಿದರು.
ಇಂಧನ ಸಂರಕ್ಷಣೆ ಮತ್ತು ಅಗ್ಗದ ಇಂಧನ ಉತ್ಪಾದನೆಯ ಬಗ್ಗೆ ಒತ್ತಿ ಹೇಳಿದ ಅವರು, ಅಗ್ಗದ ಸೌರ ವಿದ್ಯುತ್ ಉತ್ಪಾದಿಸುವುದು ವಿಜ್ಞಾನಿಗಳಿಗೆ ಸವಾಲಾಗಿದೆ. ದೇಶಾದ್ಯಂತದ ಬಡವರಿಗೆ ಲಾಭದಾಯಕವಾಗುವಂತೆ ಅದಕ್ಕಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕೆಂದರು.





