ದಿಲ್ಲಿ ವಿವಿ ವಿದ್ಯಾರ್ಥಿನಿಯ ಶವ ಸ್ನೇಹಿತನ ಮನೆಯಲ್ಲಿ ಪತ್ತೆ
ಹೊಸದಿಲ್ಲಿ, ಫೆ.7: ದಿಲ್ಲಿ ವಿಶ್ವವಿದ್ಯಾನಿಲಯದ 3ನೆ ವರ್ಷದ ವಿದ್ಯಾರ್ಥಿನಿಯೊಬ್ಬಳ ಮೃತದೇಹವು ವಾಯುವ್ಯ ದಿಲ್ಲಿಯ ಶಕ್ತಿನಗರದಲ್ಲಿರುವ ಆಕೆಯ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದೆ.
ಅರ್ಝಾ ಸಿಂಗ್ ಎಂಬ ಈ ವಿದ್ಯಾರ್ಥಿನಿಯ ಶವ ವಾತಾಯಾನ ಪ್ರದೇಶದ ಶಾಫ್ಟ್ ಒಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ಆಕೆಯ ಸ್ನೇಹಿತ ನವೀನ್ ಖತ್ರಿ ಎಂಬಾತನನ್ನು ಬಂಧಿಸಿದ್ದಾರೆ.
ಅರ್ಝಾ, ಫೆ.2ರಂದು ಕಾಲೇಜಿಗೆ ಹೋಗಿದ್ದಳು. ಆದರೆ, ಸಂಜೆ 4 ಗಂಟೆಯೊಳಗೆ ಮನೆಗೆ ಬಾರದಿದ್ದುದರಿಂದ ಹುಡುಕಾಟ ಆರಂಭಿಸಿದ್ದೇವೆಂದು ಕುಟುಂಬಗಳು ತಿಳಿಸಿದ್ದಾರೆ.
ನವೀನ್ ಖತ್ರಿ ಹಾಗೂ ಅರ್ಝಾ ಸಿಂಗ್ ಮದುವೆಯಾಗಲು ಬಯಸಿದ್ದರು. ಅದನ್ನವರು 4 ತಿಂಗಳ ಹಿಂದೆಯೇ ತಮ್ಮ ತಮ್ಮ ಮನೆಯವರಿಗೆ ತಿಳಿಸಿದ್ದರು. ಆದರೆ, ಎರಡೂ ಕುಟುಂಬಗಳು ಇದಕ್ಕೆ ಆಕ್ಷೇಪವೆತ್ತಿದ್ದವೆಂದು ಸಂಬಂಧಿಕರೊಬ್ಬರನ್ನುಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಕುಟುಂಬಗಳು ಆಕ್ಷೇಪಿಸಿದ ಬಳಿಕವೂ ಅವರಿಬ್ಬರೂ ನಿಯಮಿತವಾಗಿ ಭೇಟಿಯಾಗುತ್ತಿದ್ದರೆಂಬುದು ತಮಗೆ ತಿಳಿದುಬಂದಿತ್ತೆಂದು ಅರ್ಝಾಳ ಸೋದರಿ ಆಕಾಂಕ್ಷಾ ಎಂಬವರು ತಿಳಿಸಿದ್ದಾರೆ.
ಫೆ.4ರಂದು ನವೀನ್‌ಗೆ ಬೇರೆ ಹುಡುಗಿಯ ಜೊತೆ ಮದುವೆಯಾಗುವುದಿತ್ತು. ತನ್ನ ತಂಗಿ ಮದುವೆಯ ವೇಳೆ ಸಮಸ್ಯೆ ಸೃಷ್ಟಿಸಬಹುದೆಂಬ ಯಾವುದೇ ಶಂಕೆ ಇರುತ್ತಿದ್ದರೆ ಅವರು ತಮ್ಮಲ್ಲಿ ಮಾತನಾಡಬೇಕಿತ್ತು. ತಾವು ಸಮಸ್ಯೆಯನ್ನು ಪರಿಹರಿಸುತ್ತಿದ್ದೆವು. ಅವರೇಕೆ ಆಕೆಯನ್ನು ಕೊಲ್ಲಬೇಕಿತ್ತು? ಎಂದು ಆಕಾಂಕ್ಷಾರನ್ನುಲ್ಲೇಖಿಸಿ ಸುದ್ದಿಸಂಸ್ಥೆ ಹೇಳಿದೆ.







