ಎಚ್‌ಐವಿ ಹರಡುವಿಕೆಗೆ ಮಾದಕ ದ್ರವ್ಯ ಕಾರಣ : ಜೆ.ಪಿ.ನಡ್ಡಾ
ಹೊಸದಿಲ್ಲಿ, ಫೆ.7: ಚುಚ್ಚು ಮದ್ದಿನ ಮೂಲಕ ಮಾದಕ ದ್ರವ್ಯ ಉಪಯೋಗಿಸುವವರು ಈಶಾನ್ಯ ವಲಯದಲ್ಲಿ ಎಚ್‌ಐವಿ-ಏಡ್ಸ್ ಹರಡುವಿಕೆಗೆ ಪ್ರಮುಖ ಕಾರಣವಾಗಿಯೇ ಮುಂದುವರಿದಿದ್ದಾರೆ. ಕಾಯಿಲೆಯಿರುವ ಜನರಿಗೆ ಪರೀಕ್ಷೆ ಹಾಗೂ ಚಿಕಿತ್ಸೆಯ ಸೌಲಭ್ಯವನ್ನು ಸರಕಾರವು ಹೆಚ್ಚಿಸಿರುವ ಹೊರತಾಗಿಯೂ ಇದು ಮುಂದುವರಿದಿದೆಯೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶನಿವಾರ ಹೇಳಿದ್ದಾರೆ.
ಚುಚ್ಚು ಮದ್ದಿನ ಮೂಲಕ ಮಾದಕ ದ್ರವ್ಯ ಉಪಯೋಗಿಸುವವರಲ್ಲಿ ಈ ಕಾಯಿಲೆಯ ಅಸ್ತಿತ್ವ ಬಹಳ ಹೆಚ್ಚಾಗಿದೆ. ತಮಗೆ ಅಂತಹ ಮಾದಕ ದ್ರವ್ಯ ವ್ಯಸನಿ ಮಹಿಳೆಯರೂ ಎದುರಿಗಿದ್ದಾರೆ. ಆದಾಗ್ಯೂ, ಎಚ್‌ಐವಿ ಸೋಂಕಿರುವವರ ಚಿಕಿತ್ಸಾ ಸೌಲಭ್ಯದ ವ್ಯಾಪ್ತಿ ಹೆಚ್ಚಿದೆಯೆಂದು ಅವರು ತಿಳಿಸಿದ್ದಾರೆ.
20 ಆದ್ಯತಾ ಜಿಲ್ಲೆಗಳಲ್ಲಿ ಚುಚ್ಚು ಮದ್ದಿನ ಮೂಲಕ ಮಾದಕ ದ್ರವ್ಯ ಉಪಯೋಗಿಸುವವರನ್ನು ವಿಶೇಷವಾಗಿ ಗಮನದಲ್ಲಿರಿಸಿ, ಈಶಾನ್ಯ ವಲಯದಲ್ಲಿ ಎಚ್‌ಐವಿ ಚಿಕಿತ್ಸೆಯನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಿರುವ ಪಂಚವಾರ್ಷಿಕ ‘ಸನ್‌ರೈಸ್’ ಯೋಜನೆಗೆ ಚಾಲನೆ ನೀಡಿ ನಡ್ಡಾ ಮಾತನಾಡುತ್ತಿದ್ದರು.
ಎನ್‌ಎಸಿಒದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಮಣಿಪುರದಲ್ಲ್ಲಿ ಎಚ್‌ಐವಿ ಪೀಡಿತ ಪ್ರೌಢರ ಪ್ರಮಾಣ ಶೇ.1.1ರಷ್ಟಿದೆ. ಅದೇ ರೀತಿ ಗರ್ಭಿಣಿ ಸ್ತ್ರೀಯರಲ್ಲಿ ಶೇ.1ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎಚ್‌ಐವಿ ಪೀಡಿತರಿರುವ ದೇಶದ ಏಕೈಕ ರಾಜ್ಯ ನಾಗಾಲ್ಯಾಂಡ್ ಆಗಿದೆ.
ಎಚ್‌ಐವಿಯ ಇರುವಿಕೆಯ ಪ್ರಮಾಣ ಇಳಿಕೆಯಾಗಿದೆ. ಆದಾಗ್ಯೂ, ಈಶಾನ್ಯ ವಲಯದಲ್ಲಿ ದೇಶದ ಇತರ ಭಾಗಗಳಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ ಎಂಬುದು ಎನ್‌ಎಸಿಒದ ಮಾಹಿತಿಯಿಂದ ತಿಳಿದು ಬರುತ್ತದೆಂದು ನಡ್ಡಾ ಹೇಳಿದರು.





