ಮುಂಬೈಯಲ್ಲಿ ಗುಂಡು ಹಾರಾಟ ಗುರ್ಗಾಂವ್‌ನ ಗ್ಯಾಂಗ್‌ಸ್ಟರ್,ಇಬ್ಬರು ಪೊಲೀಸರಿಗೆ ಗಾಯ
ಮುಂಬೈ/ಗುರ್ಗಾಂವ್, ಫೆ.7: ಎರಡು ದಶಕಗಳಗೂ ಹೆಚ್ಚು ಕಾಲದಿಂದ ಪೊಲೀಸರ ನಿದ್ದೆಗೆಡಿಸಿರುವ ಅನೇಕ ಕೊಲೆ ಪ್ರಕರಣಗಳನ್ನೆದುರಿಸುತ್ತಿರುವ ಗುರ್ಗಾಂವ್‌ನ ಭಯಂಕರ ಗ್ಯಾಂಗ್‌ಸ್ಟರ್ ಒಬ್ಬ ರವಿವಾರ ಮುಂಬೈಯಲ್ಲಿ ನಡೆದ ಗುಂಡು ಹಾರಾಟ ಘಟನೆಯೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂದೀಪ್ ಗಡೋಲಿ ಎಂಬ ಪಾತಕಿಯನ್ನು ಬಂಧಿಸಲು ಪೂರ್ವಾಹ್ಣ 11ರ ವೇಳೆಗೆ ಪೂರ್ವ ಮುಂಬೈಯ ಅಂಧೇರಿಯ ಹೊಟೇಲೊಂದಕ್ಕೆ ಬಂದಿದ್ದ ಗುರ್ಗಾಂವ್‌ನ ಇಬ್ಬರು ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳ ಮೇಲೆ ಆತ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಡೋಲಿಯ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. 2015ರ ಅಕ್ಟೋಬರ್‌ನಲ್ಲಿ ನಗರ ಪಾಲಿಕೆಯ ಸದಸ್ಯ ಬಿಂದರ್ ಗುಜ್ಜರ್‌ರ ಚಾಲಕನ ಕೊಲೆ ಸೇರಿದಂತೆ ಹಲವು ಕೊಲೆ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾದವನಾಗಿದ್ದಾನೆ.
ಗಡೋಲಿಯ ವಿರುದ್ಧ 36 ಪ್ರಕರಣಗಳಿವೆ. ಬಾಂದ್ರಾದಲ್ಲಿ ರೂಪದರ್ಶಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಆತನ ಸಹಾಯಕ ಸೋನು ಎಂಬಾತನನ್ನು ಕಳೆದ ವರ್ಷ ಮುಂಬೈಯಿಂದ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಖ್ಯಾತ ಉದ್ಯಮಿಗಳನ್ನು ಗುರಿಯಿರಿಸಿದ್ದ ಸುಲಿಗೆ ಜಾಲವೊಂದರ ಕುರಿತು ಕುರುಡಾಗಿರುವುದಕ್ಕಾಗಿ ಗುರ್ಗಾಂವ್ ಪೊಲೀಸ್ ಅಧಿಕಾರಿಗಳು ಗಡೋಲಿಯಿಂದ ಪ್ರತಿ ತಿಂಗಳು ಲಕ್ಷಾಂತರ ಹಣವನ್ನು ಲಂಚವಾಗಿ ಪಡೆದಿದ್ದರೆಂದು ವರದಿಗಳು ಹೇಳಿವೆ.







