ಲೈಂಗಿಕ ದೌರ್ಜನ್ಯ ಆರೋಪ ಪುಟಾಣಿ ದೇವಾಂಶ್ ಸಾವಿನ ತನಿಖೆ ಸಿಬಿಐಗೆ
ಹೊಸದಿಲ್ಲಿ,ಫೆ.7: ಜ.30ರಂದು ಸಂಭವಿಸಿದ ಆರರ ಹರೆಯದ ಬಾಲಕ ದೇವಾಂಶ್ ಕಾಕೋರಾ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಗೆ ದಿಲ್ಲಿ ಸರಕಾರವು ಶಿಫಾರಸು ಮಾಡಲಿದೆ. ದೇವಾಂಶ್‌ನ ಹೆತ್ತವರು ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಮತ್ತು ತಮ್ಮ ಮಗ ಸಲಿಂಗರತಿಗೊಳಗಾಗಿದ್ದು, ಆತನ ಸಾವು ಆಕಸ್ಮಿಕವಲ್ಲ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ರವಿವಾರ ಇಲ್ಲಿ ಈ ವಿಷಯವನ್ನು ತಿಳಿಸಿದರು.
ತನ್ನ ಮಗನನ್ನು ಕೊಲ್ಲುವ ಮುನ್ನ ಆತನ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಲಾಗಿತ್ತು ಮತ್ತು ಆತನ ಗುಪ್ತಾಂಗಗಳ ಮೇಲೆ ಗಾಯಗಳ ಗುರುತುಗಳಿದ್ದವು ಎಂದು ಬಾಲಕನ ತಂದೆ ರಮೀತ್ ಮೀನಾ ಶನಿವಾರ ಆರೋಪಿಸಿದ್ದರು. ದಿಲ್ಲಿ ಪೊಲೀಸರು ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ದೇವಾಂಶ್ ದಕ್ಷಿಣ ದಿಲ್ಲಿಯ ವಸಂತಕುಂಜ್‌ನಲ್ಲಿರುವ ರ್ಯಾನ್ ಶಾಲೆಯಲ್ಲಿ ಒಂದನೆ ತರಗತಿಯ ವಿದ್ಯಾರ್ಥಿಯಾಗಿದ್ದ.
ತನ್ನ ಮಗನ ಗುಪ್ತಾಂಗಗಳ ಮೇಲೆ ಹತ್ತಿಯ ತುಂಡುಗಳಿದ್ದವು ಎಂದು ಹೇಳಿರುವ ಮೀನಾ,ಈ ವಿಷಯದಲ್ಲಿ ವೌನವಾಗಿರುವಂತೆ ಶಾಲೆಯ ಪ್ರಾಂಶುಪಾಲರು ತನ್ನ ಕುಟುಂಬಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.





