ರಮಾಬಾಯಿ ಜನ್ಮದಿನಕ್ಕೆ ಸರಕಾರಿ ರಜೆ ಘೋಷಿಸಲು ಒತ್ತಾಯ
ಬೆಂಗಳೂರು, ಫೆ. 7: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅವರ ಜನ್ಮದಿನ ಆಚರಿಸಲು ಸರಕಾರಿ ರಜೆ ಘೋಷಿಸಬೇಕೆಂದು ಪ್ರಗತಿಪರ ಚಿಂತಕ ಮಾಸ್ತಿ ಜಗನ್ನಾಥ್ ಇಂದಿಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ರವಿವಾರ ಇಲ್ಲಿನ ಎನ್‌ಜಿಓ ಸಭಾಂಗಣದಲ್ಲಿ ರಮಾಬಾಯಿ ಜನ್ಮದಿನದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ(ಪರಿವರ್ತನವಾದ) ನಗರ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಮಾಬಾಯಿ ಜನ್ಮ ದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳ್ಳಬಾರದು ಎಂದು ಸಲಹೆ ಮಾಡಿದರು.
ಅಂಬೇಡ್ಕರ್ ಅವರ ವಿದ್ಯಾಭ್ಯಾಸಕ್ಕೆ ಬೆನ್ನಹಿಂದೆ ನಿಂತು ತಮ್ಮ ಜೀವನವನ್ನೇ ಧಾರೆ ಎರೆದ ಧೀಮಂತ ಮಹಿಳೆ ರಮಾಬಾಯಿ. ತಮ್ಮ ಬಾಲ್ಯದಲ್ಲೆ ಅಂಬೇಡ್ಕರ್ ಅವರನ್ನು ಮದುವೆಯಾಗಿ ಕೊನೆ ಉಸಿರಿರುವ ವರೆಗೂ ಅವರ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಜಗನ್ನಾಥ್ ಸ್ಮರಿಸಿದರು.
ಅಂಬೇಡ್ಕರ್ ಅವರ ಎಲ್ಲ ಹೋರಾಟಗಳಿಗೆ ರಮಾಬಾಯಿ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಆ ಹಿನ್ನೆಲೆಯಲ್ಲಿ ರಮಾಬಾಯಿಯನ್ನು ಎಲ್ಲ ಮಾನವೀಯ ಮನಸ್ಸುಗಳು ಹಾಗೂ ಅಂಬೇಡ್ಕರ್ ವಾದಿಗಳು ಪ್ರತಿನಿತ್ಯ ಸ್ಮರಿಸಬೇಕು ಎಂದು ಮಾಸ್ತಿ ಜಗನ್ನಾಥ್ ಇದೇ ವೇಳೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಲಿತ ಮಹಿಳಾ ವೇದಿಕೆ ಅಧ್ಯಕ್ಷೆ ಪಿ.ಯಶೋಧ ಮಾತನಾಡಿ, ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಸಾವಿತ್ರಿ ಬಾಯಿ ಫುಲೆ ಮತ್ತು ರಮಾಬಾಯಿ ಅವರು ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳ ಬೇಕು ಎಂದು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು-ಮಹಿಳೆಯ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ಶೋಷಣೆ ರಹಿತ ಸಮಾಜಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಬೇಕು ಎಂದು ಹೇಳಿದರು.
ದಸಂಸ ರಾಜ್ಯ ಸಂಚಾಲಕರಾದ ಗೋವಿಂದ ರಾಜು, ವೆಂಕಟೇಶ್, ಮುನಿರಾಜು, ಮುಖಂಡರಾದ ಸುರೇಶ್ ಪೋತ, ಜಯರಾಂ ಸಾಗರ್ ಹಾಗೂ ಗೌತಮ್ ವೆಂಕಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.