ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಜಯಿಸಿದ ನ್ಯೂಝಿಲೆಂಡ್ - ವಿದಾಯ ಪಂದ್ಯ ಆಡಿದ ಮೆಕಲಮ್‌ಗೆ ಗೆಲುವಿನ ಉಡುಗೊರೆ

ಹ್ಯಾಮಿಲ್ಟನ್, ಫೆ.8: ಆಸ್ಟ್ರೇಲಿಯ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಜಯಿಸಿ, ಸರಣಿಯನ್ನು ವಶಪಡಿಸಿಕೊಂಡಿರುವ ನ್ಯೂಝಿಲೆಂಡ್ ತಂಡ ಸ್ಫೋಟಕ ಆರಂಭಿಕ ದಾಂಡಿಗ ಬ್ರೆಂಡನ್ ಮೆಕಲಮ್‌ಗೆ ಸ್ಮರಣೀಯ ಬೀಳ್ಕೊಡುಗೆ ನೀಡಿದೆ.
ಕ್ರಿಕೆಟ್‌ನ ಬಿಗ್ ಹಿಟ್ಟರ್ ಎನಿಸಿಕೊಂಡಿರುವ ಮೆಕಲಮ್ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಏಕದಿನ ಹಾಗೂ ಟೆಸ್ಟ್ ಸರಣಿ ಆರಂಭಕ್ಕೆ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಇದೀಗ ಅವರು ಏಕದಿನದಿಂದ ನಿವೃತ್ತಿಯಾಗಿದ್ದು, ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.
ಸೋಮವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಅಂತಿಮ ಪಂದ್ಯವನ್ನು ನ್ಯೂಝಿಲೆಂಡ್ 55 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ನಾಟಕೀಯ ಕುಸಿತ ಕಾಣುವುದರೊಂದಿಗೆ 246 ರನ್‌ಗೆ ಆಲೌಟಾಗಿತ್ತು. ಆಸ್ಟ್ರೇಲಿಯವನ್ನು 43.4 ಓವರ್‌ಗಳಲ್ಲಿ 191 ರನ್‌ಗೆ ನಿಯಂತ್ರಿಸಿ ಭರ್ಜರಿ ಗೆಲುವು ಸಾಧಿಸಿತು.
ನ್ಯೂಝಿಲೆಂಡ್ 246: ಆಸ್ಟ್ರೇಲಿಯದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಝಿಲೆಂಡ್‌ಗೆ ಮಾರ್ಟಿನ್ ಗಪ್ಟಿಲ್(59) ಹಾಗೂ ಬ್ರೆಂಡನ್ ಮೆಕಲಮ್(47) ಮೊದಲ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು.
ಒಂದು ಹಂತದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 223 ರನ್ ಗಳಿಸಿದ್ದ ಕಿವೀಸ್ 23 ರನ್ ಸೇರಿಸುವಷ್ಟರಲ್ಲಿ ಅಂತಿಮ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟಾಯಿತು.
ಆಸ್ಟ್ರೇಲಿಯ 191: ಗೆಲ್ಲಲು ಸಾಧಾರಣ ಸವಾಲು ಪಡೆದ ಆಸ್ಟ್ರೇಲಿಯ ತಂಡಕ್ಕೆ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ(44) ಹಾಗೂ ಡೇವಿಡ್ ವಾರ್ನರ್(14) ಮೊದಲ ವಿಕೆಟ್‌ಗೆ 39 ರನ್ ಜೊತೆಯಾಟ ನೀಡಿದರು. ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅನುಪಸ್ಥಿತಿಯಲ್ಲಿ ಕಿವೀಸ್ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ ಮ್ಯಾಟ್ ಹೆನ್ರಿ(3-60) ಡೇವಿಡ್ ವಾರ್ನರ್, ಜಾರ್ಜ್ ಬೈಲಿ(33) ಹಾಗೂ ಮಿಚೆಲ್ ಮಾರ್ಷ್(0) ಸಹಿತ ಮೂರು ವಿಕೆಟ್‌ಗಳನ್ನು ಉರುಳಿಸಿದರು.
ಗಾಯಾಳು ಮಿಚೆಲ್ ಸ್ಯಾಂಟ್ನರ್ ಬದಲಿಗೆ ಆಡಿದ ಭಾರತ ಸಂಜಾತ ಐಶ್ ಸೋಧಿ ಆಸೀಸ್ ನಾಯಕ ಸ್ಟೀವನ್ ಸ್ಮಿತ್(21) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(0) ವಿಕೆಟ್ ಕಬಳಿಸಿದರು.
ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಗೆಲುವಿನ ವಿಶ್ವಾಸದಲ್ಲಿದ್ದ ಆಸ್ಟ್ರೇಲಿಯ ಆಲ್‌ರೌಂಡರ್ ಮಾರ್ಷ್(0) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಮಾರ್ಷ್ ವೇಗಿ ಹೆನ್ರಿ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿದರು. ಕಿವೀಸ್‌ನ ಪರ ಹೆನ್ರಿ(3-60) ಯಶಸ್ವಿ ಬೌಲರ್ ಎನಿಸಿಕೊಂಡರು. ಆ್ಯಂಡರ್ಸನ್(2-16) ಹಾಗೂ ಸೋಧಿ(2-31) ತಲಾ ಎರಡು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟ್
(ಮಾರ್ಟಿನ್ ಗಪ್ಟಿಲ್ 59, ಬ್ರೆಂಡನ್ ಮೆಕಲಮ್ 47, ಎಲಿಯಟ್ 50, ಮಿಚೆಲ್ ಮಾರ್ಷ್ 3-34, ಹೇಝಲ್‌ವುಡ್ 2-45, ಹೇಸ್ಟಿಂಗ್ಸ್ 2-42, ಬೊಲೆಂಡ್ 2-59)
ಆಸ್ಟ್ರೇಲಿಯ: 43.4 ಓವರ್‌ಗಳಲ್ಲಿ 191 ರನ್‌ಗೆ ಆಲೌಟ್
(ಉಸ್ಮಾನ್ ಖ್ವಾಜಾ 44, ಮಿಚೆಲ್ ಮಾರ್ಷ್ 41, ಜಾರ್ಜ್ ಬೈಲಿ 33, ಮ್ಯಾಟ್ ಹೆನ್ರಿ 3-60, ಆ್ಯಂಡರ್ಸನ್ 2-16, ಸೋಧಿ 2-31)
ಪಂದ್ಯಶ್ರೇಷ್ಠ: ಐಶ್ ಸೋಧಿ.







