ಮಂಗಳೂರು : ಹಕ್ಕಿಗಾಗಿ ಧ್ವನಿ ಎತ್ತಿದರೆ ರಾಷ್ಟ್ರ ವಿರೋಧಿಯ ಪಟ್ಟ: ಕವಿತಾ ಕೃಷ್ಣನ್

ಮಂಗಳೂರು, ಫೆ. 8: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನಬದ್ಧವಾದ ಹಕ್ಕುಗಳಿಗೆ ಪೂರಕವಾಗಿ ತಪ್ಪುಗಳ ವಿರುದ್ಧ, ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದರೆ ರಾಷ್ಟ್ರ ವಿರೋಧಿಯ ಪಟ್ಟ ನೀಡುವ ಕಾಲಘಟ್ಟ ಇಂದಿನದ್ದಾಗಿದ್ದು, ಇದು ತೀರಾ ಅಪಾಯಕಾರಿ ಎಂದು ಅಖಿಲ ಭಾರತ ವಿಚಾರವಾದಿ ಮಹಿಳೆಯರ ಸಂಘಟನೆ (ಎಐಪಿಡಬ್ಲುಎ)ಯ ಕಾರ್ಯದರ್ಶಿ ಹಾಗೂ ನಿರ್ಭಯಾ ಪ್ರಕರಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕವಿತಾ ಕೃಷ್ಣನ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಅಭಿವೃದ್ಧಿಗಾಗಿ ನಾಗರಿಕರ ವೇದಿಕೆ ಮತ್ತು ಸೈಂಟ್ ಅಲೋಶಿಯಸ್ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ‘ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ ಮತ್ತು ಭಿನ್ನಾಭಿಪ್ರಾಯ’ ಎಂಬ ವಿಚಾರದಲ್ಲಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು, ದಲಿತನಾದ ಕಾರಣಕ್ಕೆ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಆತನನ್ನು ರಾಷ್ಟ್ರ ವಿರೋಧಿಯ ಪಟ್ಟ ನೀಡಿ ವಿವಿಯಿಂದಲೇ ಹೊರಹಾಕಲಾಯಿತು. ರೋಹಿತ್‌ನಂತೆಯೇ, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗದೆ ಮೇರ್ಲ್ವರ್ಗದ ದಬ್ಬಾಳಿಕೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ ಹಲವಾರು ಪ್ರಕರಣಗಳು ವಿವಿ ಕ್ಯಾಂಪಸ್‌ಗಳಲ್ಲಿ ನಡೆದಿದೆ ಇದು ನಿಜಕ್ಕೂ ಶೋಚನೀಯ, ಮಾತ್ರವಲ್ಲ ಆಘಾತಕಾರಿ ವಿಷಯ ಕೂಡಾ. ಮೇರ್ಲ್ವಗದ ಒತ್ತಡಕ್ಕೆ ಮಣಿದು ವಿದ್ಯಾರ್ಥಿಯೊಬ್ಬನ ಹೋರಾಟವನ್ನು ದಮನಗೊಳಿಸಲು ಸಚಿವರೇ ಆಡಳಿತ ಮಂಡಳಿಗೆ ಪತ್ರ ಬರೆದು ರಾಷ್ಟ್ರ ವಿರೋಧಿ ಎಂಬ ಶಬ್ಧಗಳಿಂದ ನಿಂದಿಸುತ್ತಾರೆಂದರೆ ಇದಕ್ಕಿಂತ ಹೆಚ್ಚಿನ ಮಾನಸಿಕ ಹಿಂಸೆ ಬೇರೆ ಬೇಕಾಗಿಲ್ಲ. ಅಷ್ಟು ಮಾತ್ರವಲ್ಲ, ಮೃತ ರೋಹಿತ್ ಪರ ಹರಿಯಾಣದಲ್ಲಿ ವಿದ್ಯಾರ್ಥಿಗಳು ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿದಾಗಲೂ ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಅವರನ್ನು ಕರೆಯಲಾಗುತ್ತದೆಯಾದರೆ ನಾವಿಂದು ಯಾವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇವೆಂಬುದನ್ನು ಚಿಂತಿಸಬೇಕಾಗಿದೆ.
ರೋಹಿತ್ ವೇಮುಲಾ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ಸಂಘಟನೆಯನ್ನು ತೀವ್ರವಾಗಿ ತರಾಟೆಗೈದ ಕವಿತಾ ಕೃಷ್ಣನ್, ಯಾರು ಯಾವ ರೀತಿ ಉಡುಪು ತೊಡಬೇಕು, ಯಾರು ಏನನ್ನು ತಿನ್ನಬೇಕು, ಯಾರಲ್ಲಿ ಮಾತನಾಡಬೇಕು ಎಂಬುದನ್ನು ಅವರೇ ನಿರ್ಧರಿಸುವಂತಿದೆ. ಮಂಗಳೂರಿನಲ್ಲೂ ಇಂತಹ ಹಲವಾರು ಘಟನೆಗಳು ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಚಿಂತನೆ ಅತೀ ಅಗತ್ಯ ಎಂದವರು ಹೇಳಿದರು.
ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡಿದ ಅವರು, ಇಂದು ಶಾಲಾ ಕಾಲೇಜು, ಮನೆ ಹಾಗೂ ಕೆಲಸದಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರುತ್ತಿದ್ದು, ಆಕೆಯ ಬಗ್ಗೆ ಪ್ರೀತಿ, ಕಾಳಜಿ, ಸಂಪ್ರದಾಯದ ನೆಪದಲ್ಲಿ ಆಕೆಯ ಸ್ವಾತಂತ್ರವನ್ನು ಕಸಿಯುವ ಯತ್ನವೂ ನಡೆಯುತ್ತಿದೆ. ಈ ಬಗ್ಗೆ ಮಹಿಳೆ ಧ್ವನಿ ಎತ್ತಲು ಆಗದ ಪರಿಸ್ಥಿತಿಯನ್ನು ಸಮಾಜ ನಿರ್ಮಾಣ ಮಾಡುತ್ತದೆ. ಧ್ವನಿ ಎತ್ತಿದಾಗ ಆಕೆಯನ್ನೇ ತಪ್ಪಿತಸ್ಥಳನ್ನಾಗಿಸುವ ಮೂಲಕ ಆಕೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತದೆ ಎಂದವರ ಬೇಸರಿಸಿದರು.
ಬಳಿಕ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಕವಿತಾ ಕೃಷ್ಣನ್ ಉತ್ತರಿಸಿದರು. ಈ ಸಂದರ್ಭ ಮಂಗಳೂರು ಅಭಿವೃದ್ಧಿಗಾಗಿ ನಾಗರಿಕರ ವೇದಿಕೆ ವತಿಯಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಅವರು ಬಹುಮಾನ ವಿತರಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಕೂಡಾ ಸಭೆಗೆ ಆಗಮಿಸಿ ಕೆಲಹೊತ್ತು ಕವಿತಾ ಕೃಷ್ಣನ್‌ರವರ ಮಾತುಗಳನ್ನು ಆಲಿಸಿದರು. ವಿದ್ಯಾರ್ಥಿನಿ ಸ್ವೇಚ್ಛಾ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ನಾಯಕ್ ಸ್ವಾಗತಿಸಿದರು. ವಿದ್ಯಾ ದಿನಕರ್ ಕಾರ್ಯಕ್ರಮ ನಿರ್ವಹಿಸಿದರು.
ಭಾರತ ಒಂದು ವರ್ಗ- ಸಂಸ್ಕೃತಿಗೆ ಸೀಮಿತವಾಗುವುದು ಅಪಾಯಕಾರಿ
ದೇಶಭಕ್ತಿ ಎಂದರೆ ಪಾಕಿಸ್ತಾನವನ್ನು ವಿರೋಧಿಸುವುದು, ಮುಸ್ಲಿಮರನ್ನು ವಿರೋಧಿಸುವುದೇ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಒಂದು ವರ್ಗ, ಒಂದು ಧರ್ಮ, ಒಂದು ಸಂಸ್ಕೃತಿಗೆ ಸೀಮಿತಗೊಳಿಸುವ ಯತ್ನ ತೀರಾ ಅಪಾಯಕಾರಿ. ಹಿಂದುತ್ವ ಮತ್ತು ಅಭಿವೃದ್ದಿಯ ಅಜೆಂಡಾದಿಂದ ದೇಶದ ಪ್ರಗತಿ ಅಸಾಧ್ಯ. ಅಭಿವೃದ್ದಿಯೆಂದರೆ ಅದು ದೀನದಲಿತರ, ನಿಮ್ನವರ್ಗದವರನ್ನು ಮುಖ್ಯವಾಹಿನಿಗೆ, ಸಮಾನತೆಗೆ ತರುವಂತದ್ದಾಗಬೇಕು ಎಂದು ಕವಿತಾ ಕೃಷ್ಣನ್ ಅಭಿಪ್ರಾಯಿಸಿದ್ದಾರೆ.







